ರಾಜ್ಯದಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ನಿರ್ಮಾಣ ಗುಪ್ತಚರ ವರದಿ
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದ್ದು,24 ಕ್ಷೇತ್ರಗಳ ಪೈಕಿ ಬಿಜೆಪಿ 95ರಿಂದ 100 ಸ್ಥಾನ, ಕಾಂಗ್ರೆಸ್ 85ರಿಂದ 95 ಹಾಗೂ ಜೆಡಿಎಸ್ 24ರಿಂದ 30 ಹಾಗೂ ಇತರರು 3ರಿಂದ 5 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಹೇಳಿದೆ. 28 ಕ್ಷೇತ್ರಗಳನ್ನು ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ 13ರಿಂದ 15 ಸ್ಥಾನ ಗೆದ್ದರೆ ಕಾಂಗ್ರೆಸ್ 12ರಿಂದ 13 ಹಾಗೂ ಜೆಡಿಎಸ್ 1ರಿಂದ 2 ಸ್ಥಾನವನ್ನು ಗೆಲ್ಲಬಹುದೆಂದು ಹೇಳಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಂದಿರುವ ಮಾಹಿತಿಯಂತೆ ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಬಿಜೆಪಿ ಬಹುಮತಕ್ಕಿಂತ 15ರಿಂದ 20 ಸ್ಥಾನ ಹಿನ್ನಡೆ ಅನುಭವಿಸಲಿದೆ ಎಂದು ವರದಿ ಕೊಟ್ಟಿದೆ.
ಇದೇ ರೀತಿ 19 ಕ್ಷೇತ್ರಗಳನ್ನು ಹೊಂದಿರುವ ಕರಾವಳಿ ಭಾಗದಲ್ಲಿ ಬಿಜೆಪಿ ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಿದೆ. ಬಿಜೆಪಿ 15ರಿಂದ 16 ಸ್ಥಾನ ಗೆದ್ದರೆ ಕಾಂಗ್ರೆಸ್ 3ರಿಂದ 4 ಸ್ಥಾನ ಪಡೆಯಲಿದ್ದು ಜೆಡಿಎಸ್ ಇಲ್ಲಿ ಖಾತೆ ತೆರೆಯುವ ಸಾಧ್ಯತೆ ಕ್ಷೀಣಿಸಿದೆ.
51 ಕ್ಷೇತ್ರಗಳನ್ನು ಹೊಂದಿರುವ ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾನೇರ ಹಣಾಹಣಿ ಇದ್ದು 2018ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಮಲ ಪಕ್ಷಕ್ಕೆ 3ರಿಂದ 5 ಸ್ಥಾನಗಳು ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರುಗಳು ಪಕ್ಷದಿಂದ ಹೊರಹೋಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಕಾರದಿಂದ ಕೆಳಗಿಳಿಸಿದ್ದು ಪಕ್ಷಕ್ಕೆ ಹಿನ್ನಡೆಯಾಗಬಹುದೆಂದು ವ್ಯಾಖ್ಯಾನಿಸಲಾಗಿದೆ.
ಲಿಂಗಾಯಿತ ಅಸ್ತ್ರವನ್ನು ಪ್ರಬಲವಾಗಿ ಬಳಸಿದ ಕಾಂಗ್ರೆಸ್‍ಗೆ ಈ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳು ಲಭಿಸಬಹುದು. ಆದರೆ ಅದು ಬಿಜೆಪಿಗಿಂತ 5 ಸ್ಥಾನದೊಳಗಿರಬಹುದೆಂದು ಉಲ್ಲೇಖ ಮಾಡಿದೆ.ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮುನ್ನಡೆ ಸಾಸಲಿದ್ದು, ಬಿಜೆಪಿ 14ರಿಂದ 16 ಸ್ಥಾನ ಬಂದರೆ ಕಾಂಗ್ರೆಸ್ 25ರಿಂದ 28 ಸ್ಥಾನಗಳು ಹಾಗೂ ಜೆಡಿಎಸ್ 1ರಿಂದ 2 ಸ್ಥಾನವನ್ನು ಗೆಲ್ಲಬಹುದು. ಮಧ್ಯಕರ್ನಾಟಕದ 26 ಕ್ಷೇತ್ರಗಳಲ್ಲಿ ಎಂದಿನಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಣಾಹಣಿ ಇದ್ದು, ಇಲ್ಲಿ ಆಡಳಿತಾರೂಢ ಬಿಜೆಪಿ 5ರಿಂದ 6 ಸ್ಥಾನಗಳನ್ನು ಕಳೆದುಕೊಳ್ಳಬಹುದು.
12ರಿಂದ 15 ಸ್ಥಾನ ಬಿಜೆಪಿಗೆ ಬಂದರೆ, ಕಾಂಗ್ರೆಸ್ 9ರಿಂದ 11 ಸ್ಥಾನ ಹಾಗೂ ಜೆಡಿಎಸ್ 1ರಿಂದ 2 ಸ್ಥಾನ ಪಡೆಯಬಹುದು. ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಜೆಡಿಎಸ್‍ಗಿಂತ ಕಾಂಗ್ರೆಸ್ ಮುನ್ನಡೆ ಸಾಸಬಹುದೆಂದು ಗುಪ್ತಚರ ವಿಭಾಗ ಹೇಳಿದೆ.
22ರಿಂದ 25 ಸ್ಥಾನ ಕಾಂಗ್ರೆಸ್‍ಗೆ, 18ರಿಂದ 20 ಸ್ಥಾನ ಜೆಡಿಎಸ್‍ಗೆ ಲಭಿಸುವ ಸಾಧ್ಯತೆ ಇದ್ದು ಬಿಜೆಪಿ 10ರಿಂದ 12 ಸ್ಥಾನ ಗೆಲ್ಲಬಹುದೆಂದು ಹೇಳಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವ ಸಾಧ್ಯತೆಗಳು ಕ್ಷೀಣಿಸಿದ್ದು, ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವರದಿ ಹೇಳಿದೆ.






