
ರಾಮನಗರ, ಅಕ್ಟೋಬರ್ 25: ಚನ್ನಪಟ್ಟಣ ಉಪಚುನಾವಣೆ ಅಖಾಡ ಹೈವೋಲ್ಟೇಜ್ ಪಡೆದುಕೊಂಡಿದೆ. ಬಿಜೆಪಿ ತೊರೆದು ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಸೈನಿಕನ ವಿರುದ್ಧ ಬಿಜೆಪಿ ಜೆಡಿಎಸ್ ದೋಸ್ತಿ ಪಡೆ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸಿದೆ. ಗುರುವಾರ ಭರ್ಜರಿ ಶಕ್ತಿಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸಿರುವ ಯೋಗೇಶ್ವರ್ಗೆ ತಿರುಗೇಟು ನೀಡುವ ರೀತಿ, ಇಂದು ಚನ್ನಪಟ್ಟಣ ಎನ್ಡಿಎ ಅಭ್ಯರ್ಥಿ ಆಗಿ ನಿಖಿಲ್ ಕುಮಾರಸ್ವಾಮಿ ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೆಂಗಲ್ ಆಂಜನೇಯ ದೇಗುಲದಲ್ಲಿ ನಿಖಿಲ್ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಶೇರ್ವಾ ಸರ್ಕಲ್ನಿಂದ 1 ಕಿಲೋ ಮೀಟರ್ ಮೆರವಣಿಗೆ ನಡೆಯಲಿದೆ. ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಬಿಜೆಪಿಯ ಹಲವು ನಾಯಕರು ಸಾಥ್ ನೀಡಲಿದ್ದಾರೆ.
ನಿಖಿಲ್ ನಿಮ್ಮ ಮನೆ ಮಗ, ಈ ಬಾರಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಹೆಚ್‌ಡಿ ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಹೇಳಿದ್ದಾರೆ. ಕಳೆದೆರಡು ಬಾರಿಯಂತೆ ಈ ಸಲವೂ ಚಕ್ರವ್ಯೂಹ ರಚನೆ ಆಗಿದೆ. ಬೇಧಿಸುವ ಶಕ್ತಿ ಕಾರ್ಯಕರ್ತರು ಕೊಡ್ತಾರೆಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.








