


ಬೆಳಗಾವಿ:
ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದ ವಿಠ್ಠಲ ದೇವಸ್ಥಾನ ಸಂಪೂರ್ಣವಾಗಿ ಗೋಚರವಾಗಿದೆ. ಡ್ಯಾಂ ನಿರ್ಮಾಣದ ವೇಳೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಣ್ಣೂರಿನಲ್ಲಿ ಈ ದೇವಸ್ಥಾನ ಇತ್ತು.ಆದರೆ ಊರ ಜಾಗ ಡ್ಯಾಂ ಹಿನ್ನೀರಿನಲ್ಲಿ ಮುಳುಗಡೆ ಹೊಂದಿದ ಕಾರಣ ಈ ದೇವಸ್ಥಾನ ನೀರಲ್ಲಿ ಮುಳುಗಿ ಹೋಗಿತ್ತು. 1978 ರಲ್ಲಿ ಮೊದಲ ಬಾರಿಗೆ ಹಿಡಕಲ್ ಜಲಾಶಯದಲ್ಲಿ ನೀರು ಖಾಲಿಯಾದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಈ ದೇವಸ್ಥಾನ ಹಾಗೂ ಅಲ್ಲಿನ ದೇವರು ಭಕ್ತರ ದರ್ಶನಕ್ಕೆ ಸಿಕ್ಕಿತ್ತು ಎನ್ನಲಾಗಿದೆ. ಅದಾದ ಬಳಿಕ 2022 ರಲ್ಲಿ ತೀವ್ರ ಬರಗಾಲವಿದ್ದ ಕಾರಣ ಡ್ಯಾಂ ನಲ್ಲಿ ನೀರು ಕಡಿಮೆಯಾಗಿದ್ದರಿಂದ ಈ ದೇವಸ್ಥಾನ ಗೋಚರವಾಗಿತ್ತು. ಅಲ್ಲದೇ ಆಗ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾಗಿದ್ದರು. ಸದ್ಯ ಜಲಾಶಯದಲ್ಲಿ ನೀರಿನ ಒಳಹರಿವು ಕಡಿಮೆಯಾಗಿದ್ದು 51 ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಕೇವಲ 5 ಟಿಎಂಸಿ ನೀರು ಮಾತ್ರ ಬಾಕಿ ಇವೆ. ಹೀಗಾಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದ ಹುಣ್ಣೂರಿನ ಪ್ರಸಿದ್ಧ ದೇವಸ್ಥಾನ ಸದ್ಯ ಗೋಚರವಾಗಿದ್ದು ಭಕ್ತರು ಬಂದು ವಿಠ್ಠಲನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.










