ಬೆಳಗಾವಿ:
ಮಳೆಗಾಲ ಪ್ರಾರಂಭವಾದರೆ ಸಾಕು ಖಾನಾಪುರದ ಕಾಡಂಚಿನ ಜನರ ಬದುಕು ಆ ದೇವರಿಗೆ ಪ್ರೀತಿ ಎಂಬಂತಾ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತೆ. ಖಾನಾಪುರದಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಖಾನಾಪುರದ ಜನ ಕಂಗಾಲಾಗಿ ಹೋಗಿದ್ದಾರೆ. ನಡುಗಡ್ಡೆಯಲ್ಲಿ ಸಿಲುಕಿಕೊಂಡ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಯನ್ನು ಶವದ ರೀತಿಯಲ್ಲಿ ಹೊತ್ತು ತರುವ ದರಿದ್ರ ಪರಿಸ್ಥಿತಿ ಖಾನಾಪುರದ ಕಾಡಂಚಿನ ಜನರಿಗೆ ಬಂದೊದಗಿದೆ. ಖಾನಾಪುರದ ಕೊಂಗಾಳ ಗ್ರಾಮದ ವೆಂಕಟ್ ಗಾಂವಕರ್ ಎನ್ನುವ ವ್ಯಕ್ತಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ವೆಂಕಟ್ ಅವರನ್ನು ಚಟ್ಟದ ಮೇಲೆ ಕೂರಿಸಿಕೊಂಡು ಸುಮಾರು 8 ಕೀಲೋಮೀಟರ್ ಗ್ರಾಮಸ್ಥರು ನಡೆದಿದ್ದಾರೆ. ಪಾಂಡ್ರಿ ನದಿ, ಬಂಡೂರಿ ನಾಲೆಯ ಕಟ್ಟಿಗೆಯ ಸೇತುವೆಯ ಮೇಲೆ ಚಟ್ಟ ಹೊತ್ತು ಸಾಗಿದ್ದಾರೆ. 8 ಕೀಮಿ ಕಾಲ್ನಡಿಗೆಯಲ್ಲಿ ಚಟ್ಟ ಹೊತ್ತು ಬಂದು ಮುಖ್ಯ ರಸ್ತೆ ಸೇರಿ ನಂತರ ಅಲ್ಲಿಂದ ವಾಹನದ ಮೂಲಕ ಸಧ್ಯ ವೆಂಕಟ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಳೆಗಾಲ ಬಂದರೆ ಸಾಕು ಖಾನಾಪುರದ ಕಾಡಂಚಿನ ಜನರ ಸ್ಥಿತಿ ಆ ದೇವರಿಗೆ ಪ್ರೀತಿ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಮಳೆಗಾಲದಲ್ಲೂ ಎಸಿ ರೂಮಿನಲ್ಲಿ ಕೂತು ಆಡಳಿತ ನಡೆಸುವ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಖಾನಾಪುರದ ಜನರ ಕೂಗು ಯಾವಾಗ ಕೇಳಿತು ಎಂದು ಜನ ಗೊಣಗುತ್ತಿದ್ದಾರೆ.




