Uncategorized

ಅಂಧಶ್ರದ್ಧೆಯ ವಿರುದ್ಧ ಪಂಚಮಶಿವಲಿಂಗೇಶ್ವರ ಶ್ರೀಗಳ ದಿಟ್ಟ ಹೆಜ್ಜೆ! ಬಾಲಕ ಜಡೆಗೆ ಮುಕ್ತಿ!

ಬೆಳಗಾವಿ:

ಅಂಧಶ್ರದ್ಧೆ ಹಾಗೂ ಮೂಢನಂಬಿಕೆಯ ವಿರುದ್ಧ ನಿಡಸೋಶಿಯ ದುರದುಂಡೇಶ್ವರ ಮಠದ ಶ್ರೀಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಗುರುಪೀಠದ ಪೀಠಾಧಿಪತಿಗಳಾದ ಪಂಚಮಶಿವಲಿಂಗೇಶ್ವರ ಶ್ರೀಗಳು ಮೂಢನಂಬಿಕೆಯ ವಿರುದ್ಧ ದಿಟ್ಟ ಹೆಜ್ಜೆ ಇಟ್ಟಿದ್ದು ಬಾಲಕನ ಜಡೆ ದೇವಿಯ ಪವಾಡ ಎಂದು ತಿಳಿದಿದ್ದ ಪೋಷಕರಿಗೆ ವೈಜ್ಞಾನಿಕ ಮನೋಭಾವ ಬಿತ್ತಿ ಬಾಲಕನ ಜಡೆಯನ್ನು ತೆಗೆಯುವಲ್ಲಿ ಶ್ರೀಗಳು ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಪಂಚಮಶಿವಲಿಂಗೇಶ್ವರ ಶ್ರೀಗಳು ಹೋಗಿದ್ದಾಗ ಅಲ್ಲಿ ಚಿಕ್ಕ ಬಾಲಕನೋರ್ವ ಜಡೆ ಬಿಟ್ಟುಕೊಂಡಿದ್ದನ್ನು ಕಂಡು ಬಾಲಕನ ಪೋಷಕರನ್ನು ಪ್ರಶ್ನೆ ಮಾಡಿದ್ದರು. ಆಗ ಅವರ ಪೋಷಕರು ಇದು ದೇವಿಯ ಪವಾಡ ಎಂದು ಗುರುಗಳಿಗೆ ಹೇಳಿದ್ದರು. ಆದರೆ ಗುರುಗಳು ಅದು ದೇವಿಯ ಪವಾಡ ಅಲ್ಲ ಅನಾರೋಗ್ಯದಿಂದ ಈ ಸ್ಥಿತಿ ಉಂಟಾಗುತ್ತದೆ ಎಂದು ತಿಳಿ ಹೇಳಿದ್ದರು. ಆದರೆ ಅದಾದ ಒಂದು ವರ್ಷದ ಬಳಿಕ ಶ್ರೀಗಳ ಬಳಿಗೆ ಆ ಪುಟ್ಟ ಬಾಲಕನನ್ನು ಆತನ ಪೋಷಕರೆ ಕರೆದುಕೊಂಡು ಬಂದಿದ್ದು ದುರದುಂಡೇಶ್ವರ ಮಠದಲ್ಲಿಯೇ ಖುದ್ದಾಗಿ ಶ್ರೀಗಳೇ ಬಾಲಕನ ಜಡೆಗೆ ಮುಕ್ತಿ ಹಾಡಿದ್ದಾರೆ. ದುರದುಂಡೇಶ್ವರ ಮೂಲ ಸಂಸ್ಥಾನದ ಮಠದ ಪಂಚಮಶಿವಲಿಂಗೇಶ್ವರ ಶ್ರೀಗಳು ಮಹಾರಾಷ್ಟ್ರದಲ್ಲಿ ಸ್ಮಶಾನದಲ್ಲಿಯೇ ಪ್ರಚಚನ ಕಾರ್ಯಕ್ರಮ ಮಾಡಿ ಜನರಿಗೆ ಮೂಢನಂಬಿಕೆಯ ವಿರುದ್ಧ ವೈಜ್ಞಾನಿಕ ಮನೋಭಾವ ಬಿತ್ತುವ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡುತ್ತ ಬಂದಿದ್ದಾರೆ.ಅಲ್ಲದೇ ಶ್ರೀ ಮಠದಲ್ಲಿ ವಿಧವಾ ವಿವಾಹಗಳನ್ನೂ ಸಹ ಶ್ರೀಗಳ ನೇತೃತ್ವದಲ್ಲಿಯೇ ನಡೆಸಲಾಗಿದೆ. ಅಲ್ಲದೆ ಅಂತರ್ಜಾತಿ ವಿವಾಹಗಳನ್ನೂ ಸಹ ಶ್ರೀಗಳು ನೆರವೇರಿಸಿದ್ದಾರೆ.ಸಮಾಜದಲ್ಲಿ ಈ ರೀತಿಯ ಆಚರಣೆ ಬಿಟ್ಟು ಜನ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!