ಹುಬ್ಬಳ್ಳಿ : ಬಿಜೆಪಿಯಲ್ಲಿ ಪೇಶ್ವೆ ಮೂಲದವರನ್ನು ಸಿಎಂ ಮಾಡಲು ಹೊರಟಿದ್ದಾರೆ ಅಂತಾ ಕೆಲದಿನಗಳ ಹಿಂದೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ನಾನು ಕುಮಾರಸ್ವಾಮಿ ಹೇಳಿಕೆ ಕುರಿತು ಹೆಚ್ಚು ಮಾತನಾಡುವುದಿಲ್ಲ. ಇಂತಹ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಕೈಕೆಳಗೆ ಕೆಲಸ ಮಾಡಲು ನನಗೆ ಅತ್ಯಂತ ಖುಷಿಯಿದೆ. ಅದು ನನ್ನ ಸೌಭಾಗ್ಯವೂ ಹೌದು. ನರೇಂದ್ರ ಮೋದಿಯಂತಹ ನಾಯಕರು ಸಿಗೋದು ಶತಮಾನಕ್ಕೊಬ್ಬರು. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ನಂಬರ್ ಒನ್ ಆಗುವತ್ತ ದಾಪುಗಾಲು ಹಾಕುತ್ತಿದೆ. ಇದೊಂದು ಕ್ರಾಂತಿಕಾರಿ ಬದಲಾವಣೆ ಎಂದರು
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ದಿನೇ ದಿನೇ ಜೋರಾಗುತ್ತಿದೆ. ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಅಧಿಕಾರದ ಗದ್ದುಗೆ ಏರೋದಕ್ಕೆ ಹಾತೊರೆಯುತ್ತಿವೆ. ಅಲ್ಲದೆ ಮುಂದಿನ ಸಿಎಂ ಗದ್ದುಗೆ ಫೈಟ್ ಸಹ ಈಗಲೇ ಜೋರಾಗಿದೆ. ಕುಮಾರಸ್ವಾಮಿ ಬ್ರಾಹ್ಮಾಣ ಸಿಎಂ ಬಗ್ಗೆ ಹೇಳಿಕೆ ನೀಡುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ರಾಜಕೀಯಕ್ಕೆ ಮರಳುತ್ತಾರೆ ಅನ್ನೋ ಮಾತುಗಳು ಜೋರಾಗಿ ಕೇಳಿ ಬರೋದಕ್ಕೆ ಶುರುವಾಗಿದ್ದವು. ಈ ಬಗ್ಗೆ ಸ್ವತಃ ಪ್ರಹ್ಲಾದ್ ಜೋಶಿಯೇ ಸ್ಪಷ್ಟನೆ ನೀಡಿದ್ದಾರೆ. ಇಡೀ ವಿಶ್ವವೇ ಪ್ರಧಾನಿ ಮೋದಿಯನ್ನು ನಿಬ್ಬೆರಗಾಗಿ ನೋಡ್ತಿದೆ. ಹೀಗಿರುವಾಗ ನಾನು ರಾಜ್ಯ ರಾಜಕಾರಣದತ್ತ ಬರಲ್ಲ. ಮುಖ್ಯಮಂತ್ರಿಯಾಗೋ ಪ್ರಶ್ನೆಯೇ ಉದ್ಭವಿಸಲ್ಲ ಎಂದಿದ್ದಾರೆ



