ಬೆಂಗಳೂರು: ಸಿಎಂ ಬೊಮ್ಮಾಯಿ ಮಂಡಿಸಲಾಗಿರುವ ಸರ್ಕಾರದ ಮುಂಗಡ ಪತ್ರ ರೈತರು, ಮಹಿಳೆಯರು ಮತ್ತು ಎಲ್ಲಾ ವರ್ಗದ ಜನರ ಹಿತಕಾಯುವ ಜನಪರ ಜನಸ್ನೇಹಿ ಮುಂಗಡಪತ್ರವಾಗಿದ್ದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯ ಪಟ್ಟಿದ್ದಾರೆ.
ನೀರಾವರಿ ವಲಯಕ್ಕೆ 25 ಸಾವಿರ ಕೋಟಿ ರೂಪಾಯಿಯ ಅನುದಾನ ನೀಡಿರುವುದು ಮತ್ತು ತನ್ಮೂಲಕ 1.50 ಲಕ್ಷ ಹೆಕ್ಟೇರ್ ನೀರಾವರಿ ಸಾಮಾರ್ಥ್ಯ ಸೃಜಿಸಲು ಅನುವು ಮಾಡಲು ಅನುದಾನ ಒದಗಿಸಿರುವುದು ರಾಜ್ಯದ ಎಲ್ಲೆಡೆ ನೀರಾವರಿ ಸೌಲಭ್ಯವನ್ನು ವಿಸ್ತರಿಸಬೇಕೆಂಬ ನಮ್ಮ ಪಕ್ಷದ ಬದ್ಧತೆಗೆ ಮುಂಗಡ ಪತ್ರದ ಬೆಂಬಲ ನೀಡಿರುವುದನ್ನು ಸ್ಪಷ್ಟಪಡಿಸುತ್ತದೆ.
ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ, ನಿರುದ್ಯೋಗಿಗಳಿಗೆ 2,000 ರೂ. ಮಾಶಾಸನ ನೀಡುವ ಯೋಜನೆಗಳು ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರಿಗೆ 500 ರೂ. ಮಾಶಾಸನ, ರೈತರ ಪರವಾಗಿ ‘ಭೂ ಸಿರಿ’ ಯೋಜನೆ, ಕ್ರಮಗಳನ್ನು ಈ ಮುಂಗಡ ಪತ್ರದಲ್ಲಿ ಘೋಷಿಸಲಾಗಿದೆ. ನೇಕಾರರು ಮತ್ತು ಇತರ ಉದ್ಯಮಿಗಳಿಗೆ ಪ್ರೋತ್ಸಾಹ ಧನವನ್ನು ವಿಸ್ತರಿಸುವುದು ಅವರೆಲ್ಲರ ಬದುಕಿನಲ್ಲಿ ಅತ್ಯಂತ ಗುಣಾತ್ಮಕ ಬದಲಾವಣೆಗಳನ್ನು ತರಲಿದೆ.
ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಒದಗಿಸುವ ಐತಿಹಾಸಿಕ ಕ್ರಾಂತಿಕಾರಕ ಕ್ರಮವು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಒದಗಿಸುವ ಮೊದಲ ರಾಜ್ಯ ಸರ್ಕಾರವಾಗಿದೆ. ವಿದ್ಯಾದಾನವನ್ನು ಕಲ್ಪನೆಯನ್ನು ನೈಜ ರೂಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನ್ವರ್ಥಕಗೊಳಿಸಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಿಗೆ ತಾರತಮ್ಯ ರಹಿತವಾದ ಅಭಿವೃದ್ಧಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡವರ ಮಕ್ಕಳಿಗೆ ನಿಗಮಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ವಿವಿಧ ವಾಣಿಜ್ಯ ಬ್ಯಾಂಕ್ಗಳಲ್ಲಿ 10 ಲಕ್ಷ ರೂಪಾಯಿ ವರೆಗೂ ಶೇಕಡಾ 4ರಷ್ಟು ಸಾಲ ಸೌಲಭ್ಯ ದೊರಕಿಸಿಕೊಡಲು ಸರ್ಕಾರ ಮುಂದಾಗಿರುವುದು, ಸ್ವಯಂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅನುದಾನ ಒದಗಿಸಿರುವುದು ಉದ್ಯೋಗ ಸೃಷ್ಟಿಗೆ ಅನುಕೂಲ ಕಲ್ಪಿಸಿದೆ ಒಟ್ಟಾರೆಯಾಗಿ ಸಿಎಂ ಬೊಮ್ಮಾಯಿ ಈ ಬಜೆಟ್ ರಾಜ್ಯದ ಮುಂದಿನ ದಿನಗಳಲ್ಲಿ ತೃಪ್ತಿಕರವಾಗಿ ಪರಿಣಮಿಸುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.