

ಬೆಳಗಾವಿ;
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್ ಶುರುವಾಗಿರುವ ಮಧ್ಯೆ ಬೆಳಗಾವಿ ನಾಯಕರ ಕೊನೆಯ ಹಂತದ ಕಸರತ್ತು ಜೋರಾಗಿದೆ.ಸಚಿವ ಸ್ಥಾನದ ಆಕಾಂಕ್ಷೇ ಹೊತ್ತು ಅಖಾಡಕ್ಕಿಳಿದಿದ್ದ ಆಪ್ತ ಶಾಸಕರ ಬಳಿಕ ಈಗ ಸ್ವತಹ ಸಚಿವ ಸತೀಶ್ ಜಾರಕಿಹೊಳಿ ಅಖಾಡಕ್ಕಿಳಿದಿದ್ದಾರೆ.ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ್ ಪರ ಸತೀಶ್ ಜಾರಕಿಹೊಳಿ ಬ್ಯಾಟಿಂಗ್ ಶುರು ಮಾಡಿದ್ದಾರೆ.
ಪಕ್ಷದ ಹಿರಿಯರಾದ ಇಬ್ಬರಲ್ಲಿ ಒಬ್ಬರಿಗೆ ಸಂಪುಟ ವಿಸ್ತರಣೆ ವೇಳೆ ಅವಕಾಶ ಕೊಡಿ ಎಂದು ಹೈಕಮಾಂಡ್ ಗೆ ಸಚಿವ ಸತೀಶ್ ಮನವಿ ಮಾಡಿದ್ದಾರೆ.ಈ ನಿಟ್ಟಿನಲ್ಲಿ ಸತೀಶ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಆಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.ಸಚಿವಾಕಾಂಕ್ಷಿ ಅಶೋಕ ಪಟ್ಟಣ್ ಜೊತೆಗೆ ಸತೀಶ್ ಜಾರಕಿಹೊಳಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.ಈ ಮೊದಲು ಆಪ್ತ ಶಾಸಕರ ಮೂಲಕ ಹೊಸ ದಾಳವನ್ನು ಸತೀಶ್ ಉರುಳಿಸಿದ್ದರು.ಕಳೆದ ವಾರವಷ್ಟೇ ದೆಹಲಿಗೆ ತೆರಳಿ ಜಿಲ್ಲೆಯ ಆರು ಶಾಸಕರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದರು ಲಿಂಗಾಯತ ಕೋಟಾದಡಿ ಅಶೋಕ್ ಪಟ್ಟಣ್, ಮಹಾಂತೇಶ ಕೌಜಲಗಿ ಅಲ್ಪಸಂಖ್ಯಾತ ಕೋಟಾದಡಿ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್‌ಗೆ ಮಂತ್ರಿ ಕೊಡುವಂತೆ ಬೇಡಿಕೆ ಇಟ್ಟಿದ್ದರು.ಸದ್ಯ ಆಪ್ತ ಶಾಸಕರ ಬಳಿಕ ಈಗ ತಾವೇ ಅಖಾಡಕ್ಕೆ ಇಳಿದ ಸತೀಶ್ ಜಾರಕಿಹೊಳಿ ಹೈಕಮಾಂಡ್ ಭೇಟಿ ಮಾಡಿದ್ದಾರೆ.ಆ ಮೂಲಕ ಸಚಿವ ಸ್ಥಾನಕ್ಕೆ ಕಸರತ್ತು ನಡೆಸುತ್ತಿರುವ ವಿರೋಧಿಗಳಿಗೆ ಸತೀಶ್ ಚೆಕ್‌ಮೇಟ್ ಇಟ್ಟಿದ್ದಾರೆ.ಇತ್ತ ಬೆಳಗಾವಿ ಜಿಲ್ಲೆಯಿಂದ ಸಚಿವ ಸ್ಥಾನಕ್ಕೇರಲು ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಇದ್ದು ಉಭಯ ನಾಯಕರೂ ಸಹ ಸಿಎಂ ಡಿಕೆಶಿ ಹಾಗೂ ಹೈಕಮಾಂಡ್ ನಾಯಕರ ಮೂಲಕ ಸಂಪುಟ ಸೇರಲು ಪ್ರಯತ್ನ ನಡೆಸುತ್ತಿದ್ದಾರೆ.












