Uncategorized

ಗಂಡನ ಮನೆಯವರ ಸಾಲದ ಕಿರುಕುಳ ನೇಣಿಗೆ ಶರಣಾದ ಅಮ್ಮ ಮಗ!

ಬೆಳಗಾವಿ:

ತಾವು ಮಾಡಿದ್ದ ಸಾಲ ತೀರಿಸಲು ಗಂಡ ಹಾಗೂ ಅತ್ತೆಯಿಂದ ಕಿರುಕುಳ, ಕಿರುಕುಳ ಸಹಿಸದೆ ಮನನೊಂದು ಗೃಹಿಣಿ ಹಾಗೂ ಮೂರು ವರ್ಷದ ಕಂದ ನೇಣಿಗೆ ಶರಣಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮೂರು ವರ್ಷದ ಕಂದಮ್ಮನನ್ನು ನೇಣು ಹಾಕಿ ಗೃಹಿಣಿ ತಾನೂ ಸಹ ಕುಣಿಕೆಗೆ ಕೊರಳೊಡ್ಡಿದ್ದಾಳೆ. ಬೆಳಗಾವಿಯ ಫೀರನವಾಡಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು ಪ್ರೇಮಾ ನಾಗೇಶ್ ತಳವಾರ(28) ಹಾಗೂ ಭುವನ್ ತಳವಾರ(3) ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ನಾಗೇಶ್ ಹಾಗೂ ಅತ್ತೆ ಸುಶೀಲಾ, ಮೈದುನ ಪರಶುರಾಮ್ ಹಾಗೂ ಗಂಡನ ತಮ್ಮನ ಹೆಂಡತಿ ಸಂಗೀತಾ, ಮರೆವ್ವ ತಳವಾರ, ಶಾರದಾ ಕಲಕಾಂವಕರ್ ಎಂಬುವವರ ವಿರುದ್ಧ ಕಿರುಕುಳದ ಆರೋಪ ಕೇಳಿ ಬಂದಿದ್ದು ಆರು ಜನರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ನಿನ್ನೆ ಸಂಜೆ ಈ ಘಟನೆ ನಡೆದಿದ್ದು ಸದ್ಯ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಮಗಳ ಆತ್ಮಹತ್ಯೆಗೆ ಪ್ರೇಮಾ ತವಳವಾರ ಗಂಡ ನಾಗೇಶ್ ಹಾಗೂ ಅತ್ತೆ ಸುಶೀಲಾಳೆ ಕಾರಣ ಎಂದು ಪ್ರೇಮಾ ಕುಟುಂಬಸ್ಥರು ಆರೋಪಿಸಿದ್ದಾರೆ. ವಯಕ್ತಿಕ ಕಾರಣಗಳಿಗಾಗಿ ನಾಗೇಶ್ ಸುಮಾರು 10 ಲಕ್ಷ ಸಾಲ ಮಾಡಿಕೊಡಿದ್ದ ಎನ್ನಲಾಗಿದ್ದು ಆ ಸಾಲ ತೀರಿಸಲು ಹೆಂಡತಿ ಪ್ರೇಮಾಗೆ ಗಂಡ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದಕ್ಕೆ ಅತ್ತೆ ಸುಶೀಲಾ ಸೇರಿ ಮನೆಯ ಸದಸ್ಯರು ಸಾಥ್ ನೀಡಿದ ಆರೋಪವನ್ನು ಪ್ರೇಮಾ ಕುಟುಂಬಸ್ಥರು ಮಾಡಿದ್ದಾರೆ. ಇದೇ ವಿಚಾರಕ್ಕೆ ಬೀಮ್ಸ್ ಶವಾಗಾರದ ಮುಂದೆಯೇ ಪ್ರೇಮಾ ಮನೆಯವರು ಅತ್ತೆ ಸುಶೀಲಾ ಮೇಲೆ ಹಲ್ಲೆಗೂ ಮುಂದಾದ ಘಟನೆಯೂ ನಡೆದಿದೆ. ಸಾಲದ ಒತ್ತಡಕ್ಕೆ ಮಗಳು ಜೀವ ಕಳೆದುಕೊಂಡಿದ್ದಾಳೆ. ಆಕೆಯ ಸಾವಿಗೆ ಕಾರಣರಾದವರನ್ನು ಬಂಧಿಸಿ ಸರಿಯಾದ ಶಿಕ್ಷೆ ನೀಡಬೇಕು ಎಂದು ಪ್ರೇಮಾ ಕುಟುಂಬಸ್ಥರು ಆಗ್ರಹಿಸಿದ್ದಾರೆ.

TV24 News Desk
the authorTV24 News Desk

Leave a Reply