ಮುಂಬೈ: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಬೆಳಗಾವಿ ಗಡಿ ಸಂಬಂಧ ಚರ್ಚೆಗಳು ಕಾವೇರಿರುವ ವೇಳೆಯೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.ದೇಶಕ್ಕೆ ಚೀನಾ ನುಗ್ಗಿದಂತೆ ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ’ ಎಂದು ಶಿವಸೇನೆಯ ನಾಯಕ ಸಂಜಯ್ ರಾವುತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚೀನಾ ಭಾರತಕ್ಕೆ ಪ್ರವೇಶ ಮಾಡಿದಂತೆ ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ನಾವು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಬಯಸುತ್ತೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಕಿಡಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರ ಇದ್ದು, ಈ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ’ ಎಂದು ಅವರು ಟೀಕಿಸಿದ್ದಾರೆ.
ಸದ್ಯ ಮಹಾರಾಷ್ಟ್ರದಲ್ಲೂ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅಲ್ಲಿಯೂ ಗಡಿ ಸಂಬಂಧ ತೀವ್ರ ಚರ್ಚೆಗಳಾಗುತ್ತಿವೆ. ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.
‘ಮಹಾರಾಷ್ಟ್ರದ ಲೋಕಸಭೆ ಸದಸ್ಯರೊಬ್ಬರನ್ನು ಬೆಳಗಾವಿಗೆ ಪ್ರವೇಶಿಸುವುದನ್ನು ತಡೆಯಲಾಗಿದೆ. ಯಾರನ್ನೂ ತಡೆಯಬಾರದು ಎಂದು ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ನಿಷೇಧ ಹೇರಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದರು.