



ಬೆಳಗಾವಿ : ಕಾಂಗ್ರೆಸ್ ಸಮಾವೇಶದ ವೇಳೆ ಸಿಎಂ ಸಿದ್ದರಾಮಯ್ಯ ಮಾಡಿದ್ದ ಅವಮಾನದಿಂದ ನೊಂದು ತಮ್ಮ ಸ್ಥಾನ ತೆರವುಗೊಳಿಸುವಂತೆ ಸರಕಾರಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬರೆದ ಪತ್ರ ವೈರಲ್ ಆಗಿದೆ.
ಕಳೆದ 31 ವರ್ಷಗಳ ಸುದೀರ್ಘ ಪೊಲೀಸ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದ ನಾರಾಯಣ ಬರಮನಿ ಮನನೊಂದು ರಾಜೀನಾಮೆಗೆ ಮುಂದಾಗಿದ್ದಾರೆ. ಈ ಕುರಿತು ಗೃಹ ಇಲಾಖೆಗೆ ಸಮಗ್ರ ಪತ್ರ ಬರೆದಿದ್ದಾರೆ.
ಕಳೆದ ಏಪ್ರಿಲ್ 28 ರಂದು ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ರಾಜ್ಯ ಕಾಂಗ್ರೆಸ್ ನಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆ ಮುಂಬಾಗ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆಗಮಿಸಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಈ ಘಟನೆ ನಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಮಾಡುತಿದ್ದರು. ತಮ್ಮ ಭಾಷಣಕ್ಕೆ ಅಡಚಣೆ ಉಂಟಾಗಿದ್ದಕ್ಕೆ ಕೋಪಗೊಂಡು ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು ಕರೆದು ಬೈದುದ್ದು ಮಾತ್ರವಲ್ಲದೆ, ಹೊಡೆಯುವ ರೀತಿಯಲ್ಲಿ ಕೈ ಎತ್ತಿದ್ದರು.
ಬೃಹತ್ ಸಾರ್ವಜನಿಕ ಸಭೆಯಲ್ಲಿ ಸಿಎಂ ಮಾಡಿದ್ದ ಅವಮಾನದಿಂದ ಬೇಸರಗೊಂಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ ಸ್ವಯಂ ಸೇವಾ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಆದರೆ ಇವರ ನಿವೃತ್ತಿ ಕೋರಿ ಬರೆದ ಪತ್ರದಿಂದ ಸರಕಾರಕ್ಕೆ ಸಾಕಷ್ಟು ಡ್ಯಾಮೆಜ್ ಉಂಟಾಗಿದೆ.
ಈಗಾಗಲೇ ಎಎಸ್ಪಿ ನಾರಾಯಣ ಬರಮನಿ ಅವರನ್ನು ಮನವೊಲಿಸಲು ಗೃಹ ಸಚಿವ ಪರಮೇಶ್ವರ ಸೇರಿದಂತೆ ಅನೇಕರು ಕಸರತ್ತು ಮುಂದುವರಿಸಿದ್ದು ಆದರೆ ಅಧಿಕಾರಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇದರಿಂದ ಸರಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.
ಸಧ್ಯ ನಾರಾಯಣ ಬರಮನಿ ಬರೆದ ಸಮಗ್ರ ಪತ್ರದಲ್ಲಿ ಸಿಎಂ ಅವರಿಂದ ಆದ ಅವಮಾನದ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ಆದ ಅವಮಾನ ಮತ್ತು ಸಾರ್ವಜನಿಕ ವಲಯದಲ್ಲಿ ಉಂಟಾದ ಮುಜುಗರವನ್ನು ಪತ್ರದಲ್ಲೇ ಬರೆದಿದ್ದಾರೆ.