






ಬೆಳಗಾವಿ:
ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪತ್ರಕರ್ತರ ಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ಪತ್ರಕರ್ತರ ನಿಧಿ/ಆರ್ಥಿಕ ನೆರವು ನೀಡಲಾಗುತ್ತಿದೆ ಅದೇ ನಿಟ್ಟಿನಲ್ಲಿ ಬೆಳಗಾವಿಯಲ್ಲೂ ಸಹ ಪಾಲಿಕೆ ವತಿಯಿಂದ ಪತ್ರಕರ್ತರ ಕುಟುಂಬಸ್ಥರಿಗೆ ಆರೋಗ್ಯ ವಿಮೆ ನೀಡುತ್ತ ಬರಲಾಗುತ್ತಿತ್ತು. ಆದರೆ ಅನುದಾನವಿಲ್ಲ ಎಂಬ ನೆಪ ಒಡ್ಡಿ ಅಧಿಕಾರಿಗಳು ಪತ್ರಕರ್ತರ ಆರೋಗ್ಯವಿಮೆಯನ್ನು ಬಂದ್ ಮಾಡಿದ್ದಾರೆ. ಆರೋಗ್ಯ ವಿಮೆ ಬಂದ್ ಮಾಡಿದನ್ನು ಖಂಡಿಸಿ ಇಂದು ಬೆಳಗಾವಿಯ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಹಾಗೂ ಪ್ರಿಂಟ್ ಮೀಡಿಯಾದ ಸದಸ್ಯರ ನೇತೃತ್ವದಲ್ಲಿ ಪಾಲಿಕೆಯಲ್ಲಿ ಪ್ರತಿಭಟನೆ ನಡೆಸಲಾಯ್ತು.. ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಅವರ ಚೇಂಬರ್ ಮುಂದೆ ಪತ್ರಕರ್ತರು ಕುಳಿತು ಆಡಳಿತ ವ್ಯವಸ್ಥೆಯ ವಿರುದ್ಧ ದಿಕ್ಕಾರ ಕೂಗಿದರು.ಇದೇ ವೇಳೆ ಮಾತನಾಡಿದ ಪತ್ರಕರ್ತರು ಮಂಗಳೂರು, ಬೀದರ್ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಇಂತಹ ನೆರವು ನೀಡಲಾಗುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ನೆರವು ನೀಡಲು ಬಜೆಟ್ ಹಂಚಿಕೆ ಇಲ್ಲ ಎಂದು ಆಯುಕ್ತರು ತಿಳಿಸಿರುವುದಾಗಿ ಪತ್ರಕರ್ತರು ಆರೋಪಿಸಿದರು.ಕಳೆದ ಸುಮಾರು ಎರಡು ತಿಂಗಳಿಂದ ಮನವಿ ಸಲ್ಲಿಸಿ, ಫಲಾನುಭವಿಗಳ ಪಟ್ಟಿ ಬಂದ ನಂತರ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿತ್ತು,ಆದರೆ ಇದುವರೆಗೆ ಆ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಕುಟುಂಬವನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದು, ಅನಾರೋಗ್ಯ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ಈ ನಿಧಿ ನೆರವಾಗುತ್ತದೆ.ಹಲವು ಬಾರಿ ಪಾಲಿಕೆ ಆಯುಕ್ತರನ್ನೂ ಸೇರಿ ಶಾಸಕ ಅಭಯ್ ಪಾಟೀಲ್ ಮೇಯರ್ ಉಪಮೇಯರ್ ಅವರಿಗೂ ಭೇಟಿಯಾಗಿ ಮನವಿ ಮಾಡಿದ್ದೆವೆ.ಮನವಿಗಳಿಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಇಂದು ಪತ್ರಕರ್ತರು ತಮ್ಮ ಕೆಲಸವನ್ನು ಬದಿಗಿಟ್ಟು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಧರಣಿ ನಡೆಸುತ್ತಿರುವುದಾಗಿ ತಿಳಿಸಿದರು.ಪ್ರತಿಭಟನೆಯ ಉದ್ದೇಶ ಸಾರ್ವಜನಿಕರಿಗೆ ಅಥವಾ ಪಾಲಿಕೆ ಅಧಿಕಾರಿಗಳ ದೈನಂದಿನ ಕಾರ್ಯಕ್ಕೆ ಅಡ್ಡಿಪಡಿಸುವುದಲ್ಲ ಬದಲಾಗಿ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಕಲ್ಯಾಣ ನಿಧಿಯನ್ನು ಮುಂದುವರಿಸಬೇಕು ಎಂಬುದೇ ಮುಖ್ಯ ಬೇಡಿಕೆ ಎಂದು ಪತ್ರಕರ್ತರು ಸ್ಪಷ್ಟಪಡಿಸಿದರು.ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡುವವರೆಗೆ ಧರಣಿ ಮುಂದುವರಿಸುವುದಾಗಿ ಪ್ರತಿಭಟನಾ ನಿರತ ಪತ್ರಕರ್ತರು ಹೇಳಿದರು.ಇತರ ಜಿಲ್ಲೆಗಳಲ್ಲಿ ಇದೇ ರೀತಿಯ ನೆರವು ನೀಡುತ್ತಿರುವಾಗ ಬೆಳಗಾವಿಯಲ್ಲಿ ಮಾತ್ರ ಏಕೆ ಬಜೆಟ್ ಹಂಚಿಕೆ ಇಲ್ಲ ಎಂಬ ಪ್ರಶ್ನೆಯನ್ನು ಪತ್ರಕರ್ತರು ಮಾಡಿದರು.ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಹಂತದಲ್ಲಿ ಸಂಘಟಿತ ಹೋರಾಟವನ್ನು ತೀವ್ರಗೊಳಿಸುವುದಾಗಿ ಪತ್ರಕರ್ತರು ಹೇಳಿದರು. ಈ ವೇಳೆ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಧ್ಯಕ್ಷ ಚಂದ್ರಕಾಂತ್ ಸುಗಂಧಿ.ಉಪಾಧ್ಯಕ್ಷ ಚಂದ್ರು ಶ್ರೀರಾಮುಡು, ಖಜಾಂಚಿ,ಸಹದೇವ ಮಾನೆ, ಪ್ರಧಾನ ಕಾರ್ಯದರ್ಶಿ ಶ್ರೀಧರ ಕೋಟಾರಗಸ್ತಿ, ಸೇರಿದಂತೆ ಪತ್ರಕರ್ತರು ಹಾಜರಿದ್ದರು.










