ಬೆಳಗಾವಿ:
ವಾಮಾಚಾರಕ್ಕೆ ಸಾಮಾನ್ಯವಾಗಿ ಲಿಂಬೆ ಹಣ್ಣು ಎಲೆ ಅಡಿಕೆ ಹಾಗೂ ತೆಂಗಿನಕಾಯಿ, ಕಪ್ಪು ಗೊಂಬೆಗಳು ಅರಿಶಿಣ ಕುಂಕುಮ ಬಳಸೋದು ಕಮಾನ್ ಆದರೆ ವಿಚಿತ್ರ ಎಂಬಂತೆ ಬೆಳಗಾವಿಯ ಯಳ್ಳೂರು ಗ್ರಾಮದ ಹೊರವಲಯದಲ್ಲಿ ಮೊಬೈಲ್ ವಾಮಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಯಳ್ಳೂರು ಗ್ರಾಮದ ಹೊರವಲಯದಲ್ಲಿರುವ ಪಾಟೀಲ್ ಎಂಬುವ ರೈತನ ಗದ್ದೆಯಲ್ಲಿ ಲಿಂಬೆಹಣ್ಣು,ತೆಂಗಿನಕಾಯಿ, ಎಲೆ ಅಡಿಕೆ ಜೊತೆಗೆ ಮೊಬೈಲ್ ಇಟ್ಟು ದುಷ್ಕರ್ಮಿಗಳು ವಾಮಾಚಾರ ಮಾಡಿ ಹೋದ ಪ್ರಕರಣ ನಡೆದಿದೆ. ಭತ್ತದ ಗದ್ದೆಯ ನಡುವೆ ಎಲ್ಲ ವಸ್ತುಗಳನ್ನೂ ಇಟ್ಟು ಜೊತೆಗೆ ಸ್ವಿಚ್ ಆಫ್ ಮಾಡಿ ಮೊಬೈಲ್ ಸಹ ಇಟ್ಟು ಹೋಗಿದ್ದು ಸ್ಥಳೀಯ ರೈತರಲ್ಲಿ ಆತಂಕಕ್ಕೆ ಎಡೆ ಮಾಡಿದೆ. ಇದನ್ನು ರೈತ ಮುಖಂಡ ರಾಜು ಮರವೇ ಪ್ರತ್ಯಕ್ಷವಾಗಿ ಕಂಡು ತಾವೇ ತೋರಿಸಿದ್ದಾರೆ. ಮೊಬೈಲ್ ನಲ್ಲಿ ವಿಡಿಯೋ ಮಾಡಿ ಅಂಧ ಶ್ರದ್ಧೆಯು ಎಲ್ಲಿಯವರೆಗೆ ಬಂದು ತಲುಪಿದೆ ಎಂದು ರಾಜು ವಿವರಿಸಿದ್ದಾರೆ. ಸಧ್ಯ ವಾಮಾಚಾರ ಮಾಡಲಾಗಿರುವ ಪಾಟೀಲ್ ಎಂಬ ರೈತ ಕುಟುಂಬ ಆತಂಕದಲ್ಲಿದ್ದು ಈ ಹಿಂದೆಯೂ ಸಹ ಇವರ ಗದ್ದೆಯಲ್ಲಿಯೇ ಮೂಸಂಬಿಗಳನ್ನು ಇಟ್ಟು ವಾಮಾಚಾರ ಮಾಡಲಾಗಿತ್ತು ಎಂದು ರಾಜು ಮರವೇ ಮಾಹಿತಿ ನೀಡಿದ್ದಾರೆ. ಅಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ಕಾಲಮಾನದಲ್ಲಿ ಚಂದ್ರ ಲೋಕಕ್ಕೆ ಮಾನವ ಹೋಗಿ ಬರುತ್ತಿರುವ ಈ ಕಾಲದಲ್ಲೂ ಸಹ ವಾಮಾಚಾರದಂತ ಅನಿಷ್ಠ ಆಚರಣೆಗಳು ನಡೆಯುತ್ತಿರುವುದು ಒಂದು ದುರಂತ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
















