ಬೆಳಗಾವಿ:
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆಯಲಾಗಿದೆ ಎನ್ನಲಾದ ಅಕ್ರಮಗಳ ಆರೋಪದ ಕುರಿತು ಸರ್ಕಾರ ತನಿಖೆ ನಡೆಸಲು ಅಸ್ತು ಎಂದಿದೆ.2018-19 ರಿಂದ 2022-23 ರವೆಗೆ ನಡೆದಿರುವ ಅವ್ಯವಹಾರ ಅಕ್ರಮ ಸಕ್ಕರೆ ಮಾರಾಟ ನಿಯಮಬಾಹಿರ ಹಣಕಾಸು ವ್ಯವಹಾರದ ಕುರಿತು ತನಿಖೆಯನ್ನು ನಡೆಸಲು ಇಬ್ಬರು ವಿಶೇಷ ವಿಚಾರಣಾಧಿಕಾರಿಗಳನ್ನು ನೇಮಕಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್ ಸಿ ಇಂಗಳಗಿ, ನಿವೃತ್ತ ಅಪರನಿಬಂಧಕ ಎಸ್ ಎಂ ಕಲೂತಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಮೂರು ತಿಂಗಳ ಒಳಗಾಗಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುಂತೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅಕ್ರಮವಾಗಿದೆ ಎಂದು ಆ ಭಾಗದ ರೈತರು ನಿರಂತರ ಹೋರಾಟವನ್ನು ಕೈಗೊಂಡಿದ್ದರು. ಅಲ್ಲದೆ ಹಲವು ಬಾರಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಗಮನಕ್ಕೂ ಅಕ್ರಮಗಳನ್ನು ದಾಖಲೆಗಳ ಸಮೇತ ತಂದಿದ್ದರು. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಸೂಚನೆ ಮೇರೆಗೆ ಸಧ್ಯ ತನಿಖಾಧಿಕಾರಿಗಳು ತನಿಖೆ ನಡೆಸಲಿದ್ದು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಹಣ ಹಾಗೂ ಸಕ್ಕರೆ ತಿಂದು ತೇಗಿದ್ದ ಅಧಿಕಾರಿಗಳಿಗೆ ಈಗ ನಡುಕ ಶುರುವಾಗಿದೆ. ಮೂರು ತಿಂಗಳಲ್ಲಿ ಕಾರ್ಖಾನೆಯ ಯಾವ್ಯಾವ ಅಕ್ರಮಗಳು ಹೊರಬೀಳಲಿವೆ ಎನ್ನುವುದೇ ಸಧ್ಯ ಕುತೂಹಲಕರವಾಗಿದ್ದು ರೈತರ ನಿರಂತರ ಹೋರಾಟಕ್ಕೆ ಸಧ್ಯ ಪ್ರಾಥಮಿಕವಾಗಿ ಜಯ ಸಿಕ್ಕಂತಾಗಿದೆ.












