ರಾಜ್ಯ

ಮುಂದುವರೆದ ಮಳೆ ಆರ್ಭಟ:ಸಿಎಂ ತುರ್ತು ಸಭೆ

ಬೆಂಗಳೂರು: ರಾಜ್ಯಾದ್ಯಂತ ವರುಣನ ಅಬ್ಬರ ಮುಂದುವರೆದಿದೆ. ಭಾರೀ ಮಳೆಯ ಹೊಡೆತಕ್ಕೆ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಸಾವು-ನೋವುಸಂಭವಿಸಿವೆ. ಮನೆ ಕುಸಿದು ಈವರೆಗೆ ಐವರು ಬಲಿಯಾಗಿದ್ದು, ನಿನ್ನೆ ರಾತ್ರಿ ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ವೃದ್ದೆಯ ಮೇಲೆ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಮಲೆನಾಡು, ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕೆರೆಕಟ್ಟೆಗಳು ತುಂಬಿವೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹೊಲ-ಗದ್ದೆಗಳು ಜಲಾವೃತಗೊಂಡಿದೆ, ಜನಜೀವನ ಅಸ್ತವ್ಯಸ್ತವಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣಕನ್ನಡ, ಬೆಳಗಾವಿ, ಕಲಬುರಗಿ, ಯಾದಗಿರಿ, ಕೊಡಗು ಸೇರಿದಂತೆ ಹಲವೆಡೆ ಮಳೆಯ ಆರ್ಭಟ ಮುಂದುವರೆದಿದೆ. ವೈಯನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಬಿನಿ ಜಲಾಶಯ ಭರ್ತಿಯ ಹಂತಕ್ಕೆ ಬಂದಿದೆ. ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿ ನೀರು ಮಾತ್ರ ಬಾಕಿ ಇದೆ.
ಹಲವೆಡೆ ಪ್ರವಾಹ ಭೀತಿ ಎದುರಾಗಿದ್ದು, ತುರ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸಂಭಾವ್ಯ ಅನಾಹುತಗಳನ್ನು ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
 
ರಾಜ್ಯದ ಹವಾಮಾನ ಪರಿಸ್ಥಿತಿ , ನಿರಂತರ ಮಳೆಯಿಂದ ಉಂಟಾಗಿರುವ ಸ್ಥಿತಿಗತಿ, ಬೆಳೆ ಪರಿಸ್ಥಿತಿ ಸೇರಿದಂತೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವಿಡಿಯೋ ಸಂವಾದದ ಮೂಲಕ ಮುಖ್ಯಮಂತ್ರಿ ,ಉಪಮುಖ್ಯಮಂತ್ರಿ ಪರಿಶೀಲನೆ ನಡೆಸಲಿದ್ದಾರೆ. ಜನ, ಜಾನುವಾರುಗಳ ಪ್ರಾಣ ರಕ್ಷಣೆ, ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!