
ಮುಂಬೈ:
ಸಾವಿರಾರು ಕೋಟಿ ಮೌಲ್ಯದ ಆಸ್ತಿ, ಭದ್ರತಾ ಸಿಬ್ಬಂದಿ, ಬೆಂಗಾವಲು ವಾಹನಗಳ ವೈಭೋಗದಲ್ಲಿ ಜೀವಿಸುವ ಮಹಾರಾಷ್ಟ್ರದ ನಂ. 1 ಶ್ರೀಮಂತ ಜನಪ್ರತಿನಿಧಿಯೊಬ್ಬರು ರಸ್ತೆಯ ಬದಿಯಲ್ಲಿ ಭಿಕ್ಷುಕನ ವೇಷ ಧರಿಸಿ ಕೈಯೊಡ್ಡಿ ನಿಂತ ಅಪರೂಪದ ವಿದ್ಯಮಾನವೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಘಾಟ್‌ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಈ ರೀತಿ ಫಕೀರನಂತೆ ರಸ್ತೆಗಳಲ್ಲಿ ಅಲೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿದೆ.
ಧರ್ಮಗುರುಗಳ ಆದೇಶ ಪಾಲನೆ: ಐಷಾರಾಮಿ ಬದುಕು ತೊರೆದು ರಸ್ತೆಗಿಳಿದ ಶಾಸಕ
ಪ್ರಸ್ತುತ ಜೈನ ಸಮುದಾಯದ ಪವಿತ್ರ ಚಾತುರ್ಮಾಸ ವ್ರತ ಆಚರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಆಧ್ಯಾತ್ಮಿಕ ಗುರು ನಮ್ರಮುನಿ ಮಹಾರಾಜ್ ಅವರು ಪರಾಗ್ ಶಾ ಅವರಿಗೆ ವಿಶೇಷ ಸಲಹೆಯೊಂದನ್ನು ನೀಡಿದ್ದರು. ಸಂಪತ್ತು ಮತ್ತು ಅಧಿಕಾರದ ಅಹಂ ಕಳಚಲು ಸಾಮಾನ್ಯ ಭಿಕ್ಷುಕನ ದಿನಚರಿಯನ್ನು ಖುದ್ದು ಅನುಭವಿಸುವಂತೆ ಸೂಚಿಸಿದ್ದರು. ಗುರುವಿನ ಮಾತಿಗೆ ಶಿರಬಾಗಿದ ಶಾಸಕರು, ತಮ್ಮ ದುಬಾರಿ ಕಾರುಗಳು, ರಕ್ಷಕರು ಹಾಗೂ ಶ್ರೀಮಂತಿಕೆಯ ಎಲ್ಲ ಲಾಂಛನಗಳನ್ನು ಬದಿಗಿಟ್ಟು ಹರಕು-ಮುರುಕು ಬಟ್ಟೆ ಧರಿಸಿ ಘಾಟ್‌ಕೋಪರ್‌ನ ಬೀದಿ ಬೀದಿಗಳಲ್ಲಿ ಸಾಮಾನ್ಯ ಯಾಚಕನಂತೆ ತಿರುಗಾಡಿದರು.
ಬೇಡಿದ ಅನ್ನವೇ ಊಟ: ಜನರ ಜೊತೆ ಬೆರೆತ ಕೋಟ್ಯಧೀಶ
ರಸ್ತೆ ಬದಿಯಲ್ಲಿ ಕುಳಿತು ಸಾರ್ವಜನಿಕರ ಬಳಿ ಕೈಚಾಚಿದ ಶಾಸಕರಿಗೆ ಜನರು ನೀಡಿದ ಪುಡಿಗಾಸು ಹಾಗೂ ಭಿಕ್ಷೆಯ ರೂಪದಲ್ಲಿ ಬಂದ ಆಹಾರವೇ ಅಂದಿನ ಊಟವಾಗಿತ್ತು. ಮುಖ ಚಹರೆ ಮರೆಮಾಚಿಕೊಂಡಿದ್ದರಿಂದ ತಾವು ಭಿಕ್ಷೆ ನೀಡುತ್ತಿರುವುದು ಸಾವಿರಾರು ಕೋಟಿ ಆಸ್ತಿಯುಳ್ಳ ಶಾಸಕನಿಗೆ ಎಂಬ ಕನಿಷ್ಠ ಕಲ್ಪನೆಯೂ ಸಾರ್ವಜನಿಕರಿಗೆ ಇರಲಿಲ್ಲ. ಈ ಆಧ್ಯಾತ್ಮಿಕ ಪ್ರಯೋಗ ಮುಗಿದ ಬಳಿಕ, ಅದೇ ಸ್ಥಳಗಳಿಗೆ ತಮ್ಮ ಅಧಿಕೃತ ರೂಪದಲ್ಲಿ ಮರಳಿದ ಪರಾಗ್ ಶಾ, ಈ ಹಿಂದೆ ತಮಗೆ ಭಿಕ್ಷೆ ನೀಡಿದವರನ್ನು ಭೇಟಿ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
₹3,383 ಕೋಟಿ ಆಸ್ತಿಯ ಹಿನ್ನೆಲೆ
ಪರಾಗ್ ಶಾ ಅವರ ಈ ನಡೆಯು ಹೆಚ್ಚು ಗಮನ ಸೆಳೆಯಲು ಅವರ ಆಸ್ತಿ ವಿವರವೇ ಪ್ರಮುಖ ಕಾರಣ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಇವರು, 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಬರೋಬ್ಬರಿ ₹3,383 ಕೋಟಿಗೂ ಅಧಿಕ ಮೌಲ್ಯದ ಸ್ಥಿರ-ಚರಾಸ್ತಿ ಘೋಷಿಸಿಕೊಂಡು ರಾಜ್ಯದ ಅತ್ಯಂತ ಸಿರಿವಂತ ಅಭ್ಯರ್ಥಿ ಎನಿಸಿಕೊಂಡಿದ್ದರು. ಈ ಹಿಂದೆ ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಇವರ ಈ ಸಿನಿಮಾ ಶೈಲಿಯ ವೇಷಾಂತರ ಮತ್ತು ಆಧ್ಯಾತ್ಮಿಕ ಪ್ರಯೋಗ ರಾಜಕೀಯ ಪಡಸಾಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.










