ಬೆಳಗಾವಿ:
ಕಳಪೆ ಬೀಜ ಮತ್ತು ರಸಗೊಬ್ಬರದ ಕೊರತೆಯ ನಡುವೆ ತತ್ತರಿಸಿ ಹೋಗಿದ್ದ ರೈತರ ಗದ್ದೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲ ದಿನಗಳಿಂದ ರೈತರ ಗೋಳು ಮಾಧ್ಯಮಗಳಲ್ಲಿ ಬಿತ್ತರವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಬೆಳಗಾವಿ ಜಿಲ್ಲೆಯ ವಿವಿಧಕಡೆಗಳಲ್ಲಿ ಹಾಳಾದ ಸೋಯಾಬಿನ್ ಬೆಳೆಯನ್ನು ಕೃಷಿ ಅಧಿಕಾರಿಗಳು ವೀಕ್ಷಣೆ ಮಾಡಿ ರೈತರ ಸಂಕಷ್ಟ ಆಲಿಸಿದ್ದಾರೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೆಚ್ ಡಿ ಕೋಳೆಕರ್ ಹಾಗೂ ಅವರ ತಂಡ ರೈತರ ಗದ್ದೆಗಳಿಗೆ ಭೇಟಿ ನೀಡಿ ಕೀಡೆಗಳ ಭಾದೆಯಿಂದ ಹಾಳಾಗಿರುವ ಹಾಗೂ ಕಳಪೆ ಬೀಜಗಳಿಂದ ತತ್ತರಿಸಿರುವ ಗದ್ದೆಗಳನ್ನು ವೀಕ್ಷಣೆ ಮಾಡಿದೆ. ಬೈಲಹೊಂಗಲ, ಸವದತ್ತಿ, ಹಾಗೂ ಬೆಳಗಾವಿ ತಾಲೂಕುಗಳಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಳಗಾವಿ ಜಿಲ್ಲೆಯಲ್ಲಿ 1.10 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ರೈತರು ಸೋಯಾಬಿನ್ ಬೆಳೆದಿದ್ದರು. ಸಧ್ಯ ಅಧಿಕಾರಿಗಳ ತಂಡ ಬೈಲಹೊಂಗಲದ ವಿವಿಧ ಹಳ್ಳಿಗಳಲ್ಲಿ ಬೆಳೆಯಲಾಗಿದ್ದ ಸೋಯಾಬಿನ್ ಬೆಳೆ ವೀಕ್ಷಣೆ ಮಾಡಿದೆ. ಸೋಯಾಬಿನ್ ಹಾಳಾದ ಹಿನ್ನೆಲೆಯಲ್ಲಿ ರೈತರು ಸ್ವತಹ ತಮ್ಮ ಕೈಯಾರ ಅದನ್ನು ನಾಶ ಮಾಡಿ ಗದ್ದೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ಸಧ್ಯ ಕೋಳೆಕರ್ ಹಾಗೂ ಅವರ ತಂಡ ಗದ್ದೆಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೆನೆ ಎಂದು ಭರವಸೆ ನೀಡಿದ್ದಾರೆ. ಇತ್ತ ಅಧಿಕಾರಿಗಳು ಭೇಟಿ ರೈತರಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು ಪರಿಹಾರದ ನಿರೀಕ್ಷೆಯಲ್ಲಿ ಸಧ್ಯ ಅನ್ನದಾತರಿದ್ದಾರೆ.










