ರಾಜ್ಯ

ಸಿನಿಮೀಯ ರೀತಿ ಶಂಕಿತ ಉಗ್ರನನ್ನು ಬಂಧಿಸಿದ ಪೊಲೀಸರು 

ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿ ರುವ ಶಂಕಿತ ಉಗ್ರ ಜುನೈದ್ ಸಹಚರ, ರೌಡಿಯೊಬ್ಬನನ್ನು ಆರ್.ಟಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಅರ್ಷದ್ ಖಾನ್ ಬಂಧಿತ ರೌಡಿ. ಈತನ ವಿರುದ್ಧ ಕೊಲೆ, ಕೊಲೆಯತ್ನ, ಕಳ್ಳತನ ಸೇರಿದಂತೆ 17 ಪ್ರಕರಣಗಳು ದಾಖಲಾಗಿವೆ. 2017ರಲ್ಲಿ ನೂರ್ ಅಹಮ್ಮದ್ ಎಂಬಾತನ ಅಪಹರಣ, ಕೊಲೆ ಪ್ರಕರಣದ ಆರೋಪಿ.
 
ಕಳೆದ ನಾಲ್ಕು ವರ್ಷಗಳಿಂದ ಆರೋಪಿ ಮೊಹಮ್ಮದ್ ಅರ್ಷದ್ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದನು. ಇತ್ತೀಚೆಗೆ ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರ್‍ಟಿ ನಗರದ ಮನೆವೊಂದರ ಮೇಲೆ ದಾಳಿ ಮಾಡಿ ಶಂಕಿತ ಐದು ಮಂದಿ ಉಗ್ರರನ್ನು ಬಂಧಿಸಿ ಐದು ಹ್ಯಾಂಡ್‍ಗ್ರೈನೆಡ್, ಮೊಬೈಲ್‍ಗಳು, ವಾಕಿಟಾಕಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಾಗ ಶಂಕಿತ ಉಗ್ರ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಯಿತು.
ಐವರು ಬಂಧಿತ ಶಂಕಿತ ಉಗ್ರರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾಗ ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ನಾಸೀರ್ ಸಂಪರ್ಕ ಆಗಿದೆ. ನಂತರ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಇವರಿಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಗ್ರೈನೆಡ್‍ಗಳು, ವಾಕಿಟಾಕಿ ಸರಬರಾಜು ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
 
ಸಿನಿಮೀಯಾ ರೀತಿ ಪೊಲೀಸರ ಕಾರ್ಯಾಚರಣೆ:
ತಲೆಮರೆಸಿಕೊಂಡಿದ್ದ ಮೊಹಮ್ಮದ್ ಅರ್ಷದ್‍ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಈತ ಮುಂಜಾನೆ 5 ಗಂಟೆ ಸುಮಾರಿನಲ್ಲಿ ಆರ್‍ಟಿ ನಗರದಲ್ಲಿನ ತನ್ನ ಮನೆಗೆ ಬಂದಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಈತನ ಮನೆ ಬಳಿ ಬಂದು ಸಿನಿಮೀಯಾ ರೀತಿ ಮನೆಯನ್ನು ಸುತ್ತುವರೆದು ಸುತ್ತ-ಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಆರೋಪಿ ಮೊಹಮ್ಮದ್ ಅರ್ಷದ್ ಮನೆಗೆ ಬಂದಿರುವುದು ಖಚಿತವಾಗಿದೆ.
ತಕ್ಷಣ ಈತನ ಬಂಧನಕ್ಕೆ ಕಾರ್ಯಾಚರಣೆ ನಡೆಸಿ ಮನೆಯ ಬಾಗಿಲು ಹೊಡೆದು ಒಳಗೆ ಪ್ರವೇಶಿಸುತ್ತಿದ್ದರಿಂದ ಆರೋಪಿ ಮೊಹಮ್ಮದ್ ಅರ್ಷದ್ ಚಾಕುವಿನಿಂದ ಕತ್ತು ಕೊಯ್ದುಕೊಳ್ಳಲು ಯತ್ನಿಸಿದ್ದಾನೆ. ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ಎರಡನೇ ಮಹಡಿಯಿಂದ ಜಿಗಿದು ಓಡಲು ಯತ್ನಿಸಿದಾಗ ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆರೋಪಿ ಮೊಹಮ್ಮದ್ ಅರ್ಷದ್ ಯಾವ ರೀತಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಂಬ ಬಗ್ಗೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
TV24 News Desk
the authorTV24 News Desk

Leave a Reply