Uncategorized

ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಸಿಪಿಐ ಬಿ.ಆರ್. ಗಡ್ಡೇಕರ್!

ಬೆಳಗಾವಿ:
ಅಪರಾಧಿಗಳಿಗೆ ಸಿಂಹಸ್ವಪ್ನವಾಗಿ, ಜನಸ್ನೇಹಿ ಪೊಲೀಸ್ ಸೇವೆಗೆ ಆದ್ಯತೆ ನೀಡಿರುವ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್. ಗಡ್ಡೇಕರ್ ಅವರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರದಾನ ಮಾಡಲಾಗುವ ಗೌರವ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವುದು ಬೆಳಗಾವಿ ನಗರ ಪೊಲೀಸ್ ಇಲಾಖೆಗೆ ಹೆಮ್ಮೆಯ ವಿಚಾರವಾಗಿದೆ.

ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಗಡ್ಡೇಕರ್ ಅವರು ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವಿಕೆ ಹಾಗೂ ಸೈಬರ್ ಅಪರಾಧಗಳ ಪತ್ತೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ಅವರಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ದೊರೆತಿದೆ.

2005ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಬಿ.ಆರ್. ಗಡ್ಡೇಕರ್ ಅವರು ಮಹಾಲಿಂಗಪುರ, ಇಳಕಳ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ಸಿಪಿಐ ಹುದ್ದೆಗೆ ಪದೋನ್ನತಿ ಪಡೆದ ನಂತರ ಸಿಸಿಬಿ ವಿಶೇಷ ಪೊಲೀಸ್ ಠಾಣೆ, ಮಾಳಮಾರುತಿ ಪೊಲೀಸ್ ಠಾಣೆ ಹಾಗೂ ಸಿಇಎನ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಅವರು ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೊಲೆ, ದರೋಡೆ, ಮನೆಗಳ್ಳತನ, ಸರಗಳ್ಳತನ, ಮಾದಕ ವಸ್ತುಗಳ ಅಕ್ರಮ ಸಾಗಾಟ, ಸೈಬರ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿರುವ ಕೀರ್ತಿ ಅವರದ್ದಾಗಿದೆ. ಸರಣಿ ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್ ವಿರುದ್ಧ ಕಾರ್ಯಾಚರಣೆ ನಡೆಸಿ 28 ಪ್ರಕರಣಗಳನ್ನು ಭೇದಿಸಿ, 1,049 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವುದು ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.

ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 59 ಮನೆಗಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಆರೋಪಿಗಳಿಂದ 1,516 ಗ್ರಾಂ ಚಿನ್ನ ಹಾಗೂ 3,308 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ, ಹಿಂಡಲಗಾ ಜೈಲಿನಲ್ಲಿದ್ದ ಭೂಗತ ರೌಡಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ರೂಪಿಸಿದ್ದ ಸಂಚನ್ನು ವಿಫಲಗೊಳಿಸಿ, ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದರು.

ಸೈಬರ್ ಅಪರಾಧಗಳ ನಿಯಂತ್ರಣದಲ್ಲಿಯೂ ಗಡ್ಡೇಕರ್ ಅವರ ಕಾರ್ಯಕ್ಷಮತೆ ಗಮನಾರ್ಹವಾಗಿದೆ. 2020ರಿಂದ 2022ರವರೆಗೆ ದಾಖಲಾಗಿದ್ದ 133 ಸೈಬರ್ ಹಣಕಾಸು ವಂಚನೆ ಪ್ರಕರಣಗಳಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಸಂತ್ರಸ್ತರಿಗೆ ಒಟ್ಟು ₹4.95 ಕೋಟಿ ಹಣವನ್ನು ಮರಳಿ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2024ರಲ್ಲಿ ನಡೆದ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಗುಜರಾತ್‌ಗೆ ತೆರಳಿ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅವರು, ₹1.11 ಕೋಟಿ ಹಣವನ್ನು ಫ್ರೀಜ್ ಮಾಡಿಸಿ, ಅದರಲ್ಲಿ ₹30 ಲಕ್ಷವನ್ನು ಸಂತ್ರಸ್ತರಿಗೆ ಮರಳಿ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

2025ರಲ್ಲಿ ಅಂತರಾಷ್ಟ್ರೀಯ ಫ್ರಾಡ್ ಕಾಲ್ ಸೆಂಟರ್ ಮೇಲೆ ನಡೆದ ಕಾರ್ಯಾಚರಣೆಯಲ್ಲಿಯೂ ಗಡ್ಡೇಕರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕದ ಹಿರಿಯ ನಾಗರಿಕರನ್ನು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಿಸುತ್ತಿದ್ದ 33 ಮಂದಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಅವರು ಭಾಗಿಯಾಗಿದ್ದರು.

ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿಯೂ ಗಮನಾರ್ಹ ಸಾಧನೆ ಮಾಡಿರುವ ಅವರು, 50 ಕೆಜಿ 452 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಹಲವು ಪ್ರಕರಣಗಳಲ್ಲಿ ಪರಿಣಾಮಕಾರಿ ತನಿಖೆ ನಡೆಸಿ ಆರೋಪಿಗಳಿಗೆ ನ್ಯಾಯಾಲಯದಿಂದ ಶಿಕ್ಷೆಯಾಗುವಂತೆ ಮಾಡಿರುವುದು ಅವರ ಸೇವಾ ದಾಖಲೆಯ ಮತ್ತೊಂದು ಪ್ರಮುಖ ಅಂಶವಾಗಿದೆ.

ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಗಾಗಿ ಬಿ.ಆರ್. ಗಡ್ಡೇಕರ್ ಅವರು ಈ ಹಿಂದೆ ಡಿಜಿ ಮತ್ತು ಐಜಿಪಿ, ಎಡಿಜಿಪಿ ಹಾಗೂ ಪೊಲೀಸ್ ಆಯುಕ್ತರಿಂದ ಹಲವು ಬಾರಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ಪಡೆದಿದ್ದಾರೆ.

ಇದೀಗ ಅವರ ಸೇವೆಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ದೊರೆತಿರುವುದು ಬೆಳಗಾವಿ ಪೊಲೀಸ್ ಇಲಾಖೆಗೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಸಿಪಿಐ ಬಿ.ಆರ್. ಗಡ್ಡೇಕರ್ ಅವರಿಗೆ TV24  ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

TV24 News Desk
the authorTV24 News Desk

Leave a Reply

error: Content is protected !!