
ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಪರ ನಿರ್ಣಯ ಪಾಸ್
ಮಹಾಜನ್ ವರದಿ ಅಂತಿಮ ಎಂದು ನಿರ್ಣಯ; ಎಂಇಎಸ್ ಸದಸ್ಯರಿಂದ ಸಭೆ ಬಹಿಷ್ಕಾರ!
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಕನ್ನಡ ಪರ ಮಹತ್ವದ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಗಿದೆ. ಪಾಲಿಕೆಯ ಸಭೆಯ ಅಂತ್ಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ಸರ್ಕಾರದಿಂದ ಬಂದಿರುವ ಪತ್ರವನ್ನು ಪಾಲಿಕೆ ಆಯುಕ್ತ ಕಾರ್ತಿಕ ಎಂ ಅವರು ಸಭೆಯಲ್ಲಿ ಓದಿ ತಿಳಿಸಿದರು.
1988ರ ಸದನದಂತೆ ಮುಂದುವರಿಯುವಂತೆ ಸರ್ಕಾರದ ಪತ್ರ
ಬೆಳಗಾವಿ ಮಹಾನಗರ ಪಾಲಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಬಂದಿರುವ ಪತ್ರದಲ್ಲಿ 1988ರ ಸದನದ ನಿರ್ಣಯದಂತೆ ಮುಂದುವರಿಯುವಂತೆ ಸೂಚಿಸಲಾಗಿದೆ. ಇದೇ ವೇಳೆ ಮಹಾಜನ್ ವರದಿಯನ್ನು ಅಂತಿಮ ಎಂದು ಪರಿಗಣಿಸುವ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಸರ್ಕಾರದ ಪತ್ರವನ್ನು ಆಯುಕ್ತರು ಸಭೆಯ ಗಮನಕ್ಕೆ ತಂದ ಬಳಿಕ, ಈ ಕುರಿತು ಚರ್ಚೆ ನಡೆಯಿತು. ನಂತರ ಮೇಯರ್ ಅವರು ನಿರ್ಣಯವನ್ನು ಮತಕ್ಕೆ ಹಾಕಿದ್ದು, ಸಭೆಯಲ್ಲಿ ಬಹುಮತದಿಂದ ಅನುಮೋದನೆ ದೊರೆಯಿತು ಎಂದು ಮೇಯರ್ ಘೋಷಿಸಿದರು.
ಮೇಯರ್ ರೋಲಿಂಗ್‌ಗೆ ಎಂಇಎಸ್ ಸದಸ್ಯರ ವಿರೋಧ
ಆದರೆ ಮೇಯರ್ ಅವರ ರೋಲಿಂಗ್‌ಗೆ ಎಂಇಎಸ್ ಬೆಂಬಲಿತ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ನಿರ್ಣಯ ಅಂಗೀಕಾರದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಎಂಇಎಸ್ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಇತ್ತ ಮೇಯರ್ ಅವರ ಆದೇಶಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಮೇಜು ತಟ್ಟಿ ಬೆಂಬಲ ಸೂಚಿಸಿದರು. ಈ ಮೂಲಕ ಸಭೆಯಲ್ಲಿ ಸರ್ಕಾರದ ಸೂಚನೆಯಂತೆ ನಿರ್ಣಯವನ್ನು ಅಂಗೀಕರಿಸಲಾಯಿತು.
ಆರು ತಿಂಗಳ ಹೋರಾಟಕ್ಕೆ ಸುಖಾಂತ್ಯ
ಬೆಳಗಾವಿ ಪಾಲಿಕೆಯ ಈ ವಿಚಾರ ಕಳೆದ ಸುಮಾರು ಆರು ತಿಂಗಳಿನಿಂದ ಚರ್ಚೆ ಹಾಗೂ ಹೋರಾಟಕ್ಕೆ ಕಾರಣವಾಗಿತ್ತು. ಇದೀಗ ಪಾಲಿಕೆಯ ಸಭೆಯಲ್ಲಿ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸುವ ನಿರ್ಣಯ ಅಂಗೀಕಾರವಾಗಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಅಂತ್ಯ ಕಂಡಂತಾಗಿದೆ.
ಸರ್ಕಾರದೊಂದಿಗೆ ನೇರ ಸಂಘರ್ಷಕ್ಕೆ ಇಳಿಯದೆ, ಸರ್ಕಾರದಿಂದ ಬಂದಿರುವ ಪತ್ರ ಹಾಗೂ ಸೂಚನೆಗಳನ್ನು ಪಾಲಿಕೆ ಅಂಗೀಕರಿಸಿದೆ. ಈ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಕನ್ನಡ ಪರ ನಿರ್ಣಯಕ್ಕೆ ಅಧಿಕೃತ ಅನುಮೋದನೆ ದೊರೆತಂತಾಗಿದೆ.
ಸಭೆಯ ಬೆಳವಣಿಗೆ ವೇಳೆ ಎಂಇಎಸ್ ಬೆಂಬಲಿತ ಸದಸ್ಯರ ವಿರೋಧ ಹಾಗೂ ಸಭೆ ಬಹಿಷ್ಕಾರ ಗಮನ ಸೆಳೆಯಿತು. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಮೇಯರ್ ಅವರ ರೋಲಿಂಗ್‌ಗೆ ಮೇಜು ತಟ್ಟಿ ಬೆಂಬಲ ವ್ಯಕ್ತಪಡಿಸಿದರು.
ಒಟ್ಟಾರೆ, ಸರ್ಕಾರದ ನಿರ್ದೇಶನದಂತೆ ಪಾಲಿಕೆ ನಡೆದುಕೊಂಡಿದ್ದು, ಕಳೆದ ಆರು ತಿಂಗಳಿಂದ ಮುಂದುವರಿದಿದ್ದ ಈ ವಿವಾದಕ್ಕೆ ಸಭೆಯ ನಿರ್ಣಯದ ಮೂಲಕ ಹೊಸ ತಿರುವು ದೊರೆತಿದೆ.








