

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಆರಂಭದಲ್ಲೇ ವಂದೇ ಮಾತರಂ ಹಾಡುವ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದಿದೆ.
ಸಭೆ ಆರಂಭಕ್ಕೂ ಮುನ್ನ ಮೊದಲು ನಾಡಗೀತೆಯನ್ನು ಪ್ರಸಾರ ಮಾಡಲಾಯಿತು. ಬಳಿಕ ರಾಜ್ಯ ಸರ್ಕಾರದ ಆದೇಶದಂತೆ ವಂದೇ ಮಾತರಂನ ಎರಡು ಚರಣಗಳನ್ನು ಪ್ಲೇ ಮಾಡಲಾಯಿತು. ಆದರೆ ಇದಾದ ಬಳಿಕ ಆಡಳಿತಾರೂಢ ಬಿಜೆಪಿ ಸದಸ್ಯರು ವಂದೇ ಮಾತರಂನ ಉಳಿದ ಚರಣಗಳನ್ನು ತಾವೇ ಹಾಡಿದರು.
ಇದಕ್ಕೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಮೇಯರ್ ಪ್ರೀತಿ ಕಾಮಕಾರ ಅವರು ಎರಡು ಚರಣಗಳಷ್ಟೇ ವಂದೇ ಮಾತರಂ ಪ್ಲೇ ಮಾಡಿದ್ದಕ್ಕೆ ಆಪರೇಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಅವರನ್ನು ತಕ್ಷಣ ಕೆಲಸದಿಂದ ತೆಗೆದುಹಾಕುವಂತೆ ಸೂಚಿಸಿದರು.
ಆದರೆ ಮಧ್ಯಪ್ರವೇಶಿಸಿದ ಉಪ ಮೇಯರ್ ಹನುಮಂತ ಕೊಂಗಾಳಿ, ವಂದೇ ಮಾತರಂನ ಪೂರ್ಣ ಹಾಡು ಪ್ರಸಾರ ಮಾಡುವಂತೆ ಶ್ರೇಯಸ್ ನಾಯಕ ಅವರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರು. ಇದಕ್ಕೆ ಆಯುಕ್ತರು ಸರ್ಕಾರದ ಆದೇಶದಂತೆ ಎರಡು ಚರಣಗಳನ್ನು ಮಾತ್ರ ಹಾಡಿಸಲಾಗುವುದು ಎಂದು ಲಿಖಿತ ಉತ್ತರ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹೀಗಾಗಿ ಸರ್ಕಾರದ ಆದೇಶದಂತೆ ಎರಡು ಚರಣಗಳನ್ನು ಪ್ಲೇ ಮಾಡಲಾಗಿದ್ದು, ಉಳಿದ ಚರಣಗಳನ್ನು ಪಾಲಿಕೆ ಸದಸ್ಯರು ಹಾಡಿದ್ದಾರೆ ಎಂದು ಉಪ ಮೇಯರ್ ಹನುಮಂತ ಕೊಂಗಾಳಿ ಹೇಳಿದರು.









