Uncategorized

ಡಿಸೇಲ್ ಇಲ್ಲದೆ ಚನ್ನಮ್ಮ ವೃತ್ತದಲ್ಲಿಯೇ ನಿಂತಕಸದ ವಾಹನ!ಪಾಲಿಕೆ ಬಳಿಕ ಡಿಸೇಲ್ ಹಾಕಲೂ ಹಣವಿಲ್ವಾ?

ಬೆಳಗಾವಿ:

ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಬೆಳಗಾವಿ ಮಹಾನಗರ ಪಾಲಿಕೆಯ ಕಸದ ವಾಹನಕ್ಕೆ ಡಿಸೇಲ್ ಕೊರತೆಯಾಗಿ ನಡು ರಸ್ತೆಯಲ್ಲಿಯೇ ಕಸದ ವಾಹನ ನಿಂತಿದೆ. ನಗರದ ಪ್ರಮುಖ ಚನ್ನಮ್ಮ ವೃತ್ತದ ಸಿಗ್ನಲ್ ಬಳಿಯೇ ಕಾರ್ಪೊರೇಷನ್‌ನ ಕಸದ ವಾಹನ ಡಿಸೇಲ್ ಇಲ್ಲದೆ ನಿಂತುಕೊಂಡ ಪರಿಣಾಮ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾದ ಘಟನೆ ನಡೆದಿದೆ.
ನಗರದ ವಿವಿಧ ಪ್ರದೇಶಗಳಲ್ಲಿ ಕಸ ಸಂಗ್ರಹಿಸಿ ಸಾಗಿಸುತ್ತಿದ್ದ ಕಾರ್ಪೊರೇಷನ್ ವಾಹನವು ಚನ್ನಮ್ಮ ವೃತ್ತದ ಬಳಿ ಬಂದಾಗ ಏಕಾಏಕಿ ನಿಂತಿದೆ ಎನ್ನಲಾಗಿದೆ. ವಾಹನದಲ್ಲಿ ಡಿಸೇಲ್ ಇಲ್ಲದ ಕಾರಣ ಮುಂದೆ ಸಾಗಲು ಸಾಧ್ಯವಾಗದೆ, ಸಿಗ್ನಲ್ ಸಮೀಪದಲ್ಲೇ ವಾಹನ ನಿಂತುಕೊಂಡಿದೆ.ಪ್ರಮುಖ ವೃತ್ತ ಹಾಗೂ ಸಿಗ್ನಲ್ ಪ್ರದೇಶದಲ್ಲೇ ಕಸದ ವಾಹನ ನಿಂತಿದ್ದರಿಂದ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಇದರಿಂದ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. ನಗರದ ಪ್ರಮುಖ ರಸ್ತೆಯಲ್ಲಿ ಪಾಲಿಕೆಯ ವಾಹನವೇ ಈ ರೀತಿಯಾಗಿ ನಿಂತಿರುವುದು ಸಾರ್ವಜನಿಕರ ಗಮನ ಸೆಳೆದಿದೆ.ಡಿಸೇಲ್ ಕೊರತೆಯಿಂದ ಸಿಬ್ಬಂದಿ ಪರದಾಟ
ಕಾರ್ಪೊರೇಷನ್ ವಾಹನಗಳಿಗೆ ಸಮರ್ಪಕವಾಗಿ ಡಿಸೇಲ್ ಪೂರೈಕೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಪ್ರತಿನಿತ್ಯ ನಗರದ ವಿವಿಧ ಬಡಾವಣೆಗಳು ಹಾಗೂ ಪ್ರಮುಖ ಪ್ರದೇಶಗಳಿಂದ ಕಸ ಸಂಗ್ರಹಿಸುವ ವಾಹನಗಳಿಗೆ ಅಗತ್ಯ ಪ್ರಮಾಣದಲ್ಲಿ ಡಿಸೇಲ್‌ ಒದಗಿಸುವುದು ಪಾಲಿಕೆಯ ಜವಾಬ್ದಾರಿಯಾಗಿದೆ.ಆದರೆ, ವಾಹನದಲ್ಲಿ ಡಿಸೇಲ್ ಮುಗಿದು ನಡುರಸ್ತೆಯಲ್ಲೇ ವಾಹನ ನಿಂತಿರುವ ಘಟನೆ ಅಧಿಕಾರಿಗಳ ನಿರ್ವಹಣೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ವಾಹನಕ್ಕೆ ಮುಂಚಿತವಾಗಿಯೇ ಡಿಸೇಲ್ ಹಾಕಿಸಿದ್ದರೆ ಪ್ರಮುಖ ವೃತ್ತದಲ್ಲೇ ಈ ರೀತಿಯ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿವೆ.
ಚಾಲಕನೇ ಡಿಸೇಲ್ ತಂದು ವಾಹನ ಚಲಾಯಿಸಿದ್ದು
ವಾಹನ ನಿಂತ ಬಳಿಕ ಸಮಸ್ಯೆ ಪರಿಹರಿಸಲು ಚಾಲಕನೇ ಸ್ವತಃ ಡಿಸೇಲ್ ತಂದು ವಾಹನಕ್ಕೆ ಹಾಕಿಸಿಕೊಂಡು ಬಳಿಕ ವಾಹನವನ್ನು ಅಲ್ಲಿಂದ ಚಲಾಯಿಸಿಕೊಂಡು ತೆರಳಿದ್ದಾನೆ
ಪಾಲಿಕೆಯ ವಾಹನಗಳಿಗೆ ಅಗತ್ಯವಿರುವ ಇಂಧನವನ್ನು ಸಮರ್ಪಕವಾಗಿ ಪೂರೈಸುವ ವ್ಯವಸ್ಥೆ ಇದ್ದರೂ, ಚಾಲಕನೇ ಡಿಸೇಲ್ ತಂದು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಬಂದಿರುವುದು ಚರ್ಚೆಗೆ ಕಾರಣವಾಗಿದೆ.
ಸಾರ್ವಜನಿಕರ ಆಕ್ರೋಶ
ನಗರದ ಸ್ವಚ್ಛತಾ ಕಾರ್ಯಕ್ಕೆ ಬಳಸುವ ಕಾರ್ಪೊರೇಷನ್ ವಾಹನಗಳಿಗೆ ಡಿಸೇಲ್ ಹಾಕಿಸಲು ಹಣದ ಕೊರತೆಯೇ ಕಾರಣವೇ? ಅಥವಾ ಇಂಧನ ಪೂರೈಕೆ ಮತ್ತು ನಿರ್ವಹಣೆಯಲ್ಲಿ ಸಮನ್ವಯದ ಕೊರತೆಯೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ನಗರದ ಪ್ರಮುಖ ವೃತ್ತದಲ್ಲೇ ಕಸದ ವಾಹನ ಡಿಸೇಲ್ ಇಲ್ಲದೆ ನಿಂತಿರುವುದರಿಂದ ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಸ್ವಚ್ಛತಾ ವ್ಯವಸ್ಥೆ ಯಾವುದೇ ಕಾರಣಕ್ಕೂ ಅಸ್ತವ್ಯಸ್ತವಾಗದಂತೆ ಪಾಲಿಕೆ ಅಧಿಕಾರಿಗಳು ವಾಹನಗಳಿಗೆ ಅಗತ್ಯವಿರುವ ಇಂಧನವನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚನ್ನಮ್ಮ ವೃತ್ತದಂತಹ ಪ್ರಮುಖ ಸಂಚಾರ ಪ್ರದೇಶದಲ್ಲೇ ಪಾಲಿಕೆಯ ವಾಹನ ಇಂಧನವಿಲ್ಲದೆ ನಿಂತಿರುವ ಘಟನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ಪಾಲಿಕೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ.

TV24 News Desk
the authorTV24 News Desk

Leave a Reply

error: Content is protected !!