


ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿ ಹಾಗೂ ಪಾಲಿಕೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ. ಪಾಲಿಕೆ ಸಭೆಯಲ್ಲಿ ಅಭಿವೃದ್ಧಿ ವಿಚಾರವಾಗಿ ನಡೆದ ಚರ್ಚೆ ಬಳಿಕ ಈ ವಾಗ್ವಾದ ನಡೆದಿದೆ.ಪಾಲಿಕೆ ಅಭಿವೃದ್ಧಿ ಶಾಖೆಯ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಹಾಗೂ ಎಂಐಎಂ ಪಾಲಿಕೆ ಸದಸ್ಯ ಶಾಹಿದ್ ಖಾನ್ ಪಠಾಣ್ ನಡುವೆ ಸಭೆ ಮುಗಿದ ಬಳಿಕ ವಾಗ್ವಾದ ನಡೆದಿದೆ. ಸಭೆಯಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗಿದೆ ಎಂದು ನಿಪ್ಪಾಣಿಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅಭಿವೃದ್ಧಿ ಕಾಮಗಾರಿಗಳ ವಿಚಾರವಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಾಹಿದ್ ಖಾನ್ ಪಠಾಣ್ ಅವರು, “ಕೆಲಸ ಮಾಡಲು ನೀವು ಲಾಯಕ್ ಇಲ್ಲ” ಎಂದು ಅಧಿಕಾರಿಯನ್ನು ಟೀಕಿಸಿದ್ದರು ಈ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಅಧಿಕಾರಿ, ಸಭೆ ಮುಗಿದ ಬಳಿಕ ಸದಸ್ಯರನ್ನು ಪ್ರಶ್ನಿಸಿ ವಾಗ್ವಾದ ನಡೆಸಿದರು ಎನ್ನಲಾಗಿದೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ತೀವ್ರಗೊಂಡಿದ್ದು, ಲಕ್ಷ್ಮೀ ನಿಪ್ಪಾಣಿಕರ್ ಅವರು ಶಾಹಿದ್ ಖಾನ್ ಪಠಾಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಕೆಲಸ ಬಿಡಲು ಸಿದ್ಧ, ಆದರೆ ಆತನನ್ನು ಬಿಡುವುದಿಲ್ಲ. ನನ್ನ ವಿರುದ್ಧ ಮಾತನಾಡಲು ಅವನ್ಯಾರು?” ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಹಿಳಾ ಅಧಿಕಾರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ನಿಪ್ಪಾಣಿಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿರುದ್ಧ ಮಾಡಿರುವ ಟೀಕೆಗಳನ್ನು ಅವರು ಖಂಡಿಸಿದ್ದು, ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಪರಿಸ್ಥಿತಿ ತಿಳಿಗೊಳಿಸಲು ಕೆಲ ಬಿಜೆಪಿ ಪಾಲಿಕೆ ಸದಸ್ಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಲು ಮುಂದಾದರು ಎನ್ನಲಾಗಿದೆ. ಆದರೆ ಈ ವೇಳೆ ಮಧ್ಯಪ್ರವೇಶಿಸಿದ ಸದಸ್ಯರ ವಿರುದ್ಧವೂ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
“ನೀವು ಕೌನ್ಸಿಲ್‌ನಲ್ಲಿ ಒಬ್ಬ ಮಹಿಳಾ ಅಧಿಕಾರಿಗೆ ಅಪಮಾನ ಮಾಡುತ್ತಿದ್ದೀರಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಅಧಿಕಾರಿಯ ವಿರುದ್ಧ ಹಣದ ವಿಚಾರದಲ್ಲಿ ಮಾಡಲಾಗುತ್ತಿರುವ ಆರೋಪಗಳಿಗೂ ಪ್ರತಿಕ್ರಿಯಿಸಿದ ಅವರು, “ದುಡ್ಡು ಕೊಟ್ಟರೆ ಎಲ್ಲರೂ ಚಲೋ, ನಾನು ಅವನಿಗೆ ಒಂದು ಪೈಸೆ ದುಡ್ಡು ಕೊಡಲ್ಲ” ಎಂದು ಹೇಳಿದ್ದಾರೆ.
ಪಾಲಿಕೆ ಕಚೇರಿಯಲ್ಲೇ ಏರುಧ್ವನಿಯಲ್ಲಿ ನಡೆದ ಈ ಮಾತಿನ ಚಕಮಕಿ ಕೆಲಕಾಲ ಗೊಂದಲದ ವಾತಾವರಣಕ್ಕೆ ಕಾರಣವಾಯಿತು. ಅಭಿವೃದ್ಧಿ ಕಾಮಗಾರಿಗಳ ವಿಚಾರವಾಗಿ ಆರಂಭವಾದ ಚರ್ಚೆ ಬಳಿಕ ಅಧಿಕಾರಿ ಹಾಗೂ ಸದಸ್ಯರ ನಡುವಿನ ವೈಯಕ್ತಿಕ ವಾಗ್ವಾದದ ಮಟ್ಟಕ್ಕೆ ತಲುಪಿದಂತಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪಾಲಿಕೆ ಆಡಳಿತದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸಭೆಯಲ್ಲಿ ನಡೆದ ಚರ್ಚೆ ಮತ್ತು ಬಳಿಕ ನಡೆದ ವಾಗ್ವಾದದ ಕುರಿತು ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.







