ಬೆಳಗಾವಿ:
ಬೆಳಗಾವಿಯ ಕೋರ್ಟ್ ಸಮೀಪ ವಕೀಲನ ಮೇಲೆ ಹಲ್ಲೆಯಾಗಿದೆ. ಹಲ್ಲೆಗೊಳಗಾದ ವಕೀಲನನ್ನು ಜಾಹೀರ್ ಅಬ್ಬಾಸ್ ಹುಕ್ಕೇರಿ ಎಂದು ಗುರುತಿಸಲಾಗಿದೆ. ಜಮೀನು ವ್ಯಾಜ್ಯ ಕೇಸ್ ಮುಗಿಸಿ ಕೋರ್ಟ್ ಹೊರಗೆ ಬರುತ್ತಿದ್ದಂತೆ ಇಬ್ಬರು ಇಟ್ಟಿಗೆಗಳಿಂದ ಜಾಹೀರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿದವರ ಪೈಕಿ ಓರ್ವನ ಹೆಸರು ಸೋಹಿಲ್ ಇನಾಮದಾರ್ ಎಂದು ತಿಳಿದು ಬಂದಿದ್ದು ಆತನೊಂದಿಗಿದ್ದ ಇನ್ನೊಬ್ಬ ಯಾರೆಂದು ತಿಳಿದಿಲ್ಲ. ಕಳೆದ ಕೆಲ ದಿನಗಳ ಹಿಂದೆ ಶಾಲೆಯಲ್ಲಿ ಮಕ್ಕಳು ಜಗಳವಾಡಿಕೊಂಡಿದ್ದರು.ಇದನ್ನ ಹಲ್ಲೆಗೊಳಗಾದ ಜಾಹೀರ್ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇಂದು ದೊಡ್ಡವರ ಮಧ್ಯೆ ಜಗಳವಾಗಿದ್ದು ಕಲ್ಲು ಹಾಗೂ ಇಟ್ಟಿಗೆ, ರಾಡ್ ನಿಂದ ವಕೀಲ ಜಾಹೀರ್ ಮೇಲೆ ಹಲ್ಲೆ ಮಾಡಲಾಗಿದೆ. ಜಾಹೀರ್ ತಲೆ, ಕಿವಿ,ಮೂಗು,ಹೊಟ್ಟೆಯ ಭಾಗಕ್ಕೆ ಗಾಯಗಳಾಗಿದ್ದು ಸಧ್ಯ ಗಾಯಗೊಂಡಿರುವ ವಕೀಲ ಜಾಹೀರನನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಆಗುತ್ತಿದ್ದಂತೆ ವಕೀಲರೆಲ್ಲರೂ ಹೊರಗಡೆ ಬರುಷ್ಟರಲ್ಲಿ ಹಲ್ಲೆ ಮಾಡಿದ ಆರೋಪಿಗಳು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಾರ್ಕೇಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.














