


ಬೆಳಗಾವಿ:
ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮತ್ತೆ ಜೀವ ಕಳೆ ಬಂದಿದೆ.ಕಳೆದ ಎರಡು ತಿಂಗಳಿನಿಂದ ಸಕಾಲಕ್ಕೆ ಮಳೆಯಾಗದೆ ಇರುವ ಕಾರಣಕ್ಕೆ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಬತ್ತಿ ಹೋಗಿತ್ತು. ಈಗ ಮಹಾರಾಷ್ಟ್ರದ ಘಟ್ಟಪ್ರದೇಶಗಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಕೃಷ್ಣಾನದಿಗೆ ಜೀವ ಕಳೆ ಬಂದಿದೆ. ಇದರಿಂದಾಗ ನದಿ ತೀರದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಉತ್ತರ ಕರ್ನಾಟಕದ ಅತ್ಯಂತ ದೊಡ್ಡ ನದಿ ಎಂದು ಕರೆಯಲ್ಪಡುವ ಕೃಷ್ಣೆ ಕಳೆದ ಎರಡು ತಿಂಗಳಿನಿಂದ ಬತ್ತಿ ಹೋಗಿತ್ತು. ಜನಜಾನುವಾರುಗಳಿಗೂ ಸಹ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿತ್ತು. ಈಗ ಕೃಷ್ಣಾ ನದಿ ಅಷ್ಟೇ ಅಲ್ಲದೆ ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ,ಘಟಪ್ರಭಾ ನದಿಗಳಿಗೂ ಸಹ ಅಲ್ಪ ಪ್ರಮಾಣದ ನೀರು ಬಂದಿದ್ದು ಸದ್ಯ ಕೃಷ್ಣೆಯ ಒಡಲಲ್ಲಿ ಗಂಗೆ ನಲಿದಾಡುತ್ತಿದ್ದಾಳೆ. ಸದ್ಯ ಕೃಷ್ಣಾ ನದಿಗೆ 5 ಸಾವಿರ ಕ್ಯೂಸೇಕ್ ಒಳಹರಿವಿದ್ದು ನೀರಿಲ್ಲದೆ ಕಂಗೆಟ್ಟಿದ್ದ ಉತ್ತರ ಕರ್ನಾಟಕದ ಜನರಿಗೆ ಕೃಷ್ಣಾ ನದಿಗೆ ನೀರು ಬರುತ್ತಿರುವುದು ಸಂತಸ ತಂದಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದ ಮೂಲಕ ಪ್ರಯಾಣ ಬೆಳೆಸುವ ಕೃಷ್ಣೆ ಆಂದ್ರಪ್ರದೇಶದ ಮೂಲಕ ಕಡೆಗೆ ಬಂಗಾಳಕೊಲ್ಲಿಯಲ್ಲಿ ಸಮುದ್ರಕ್ಕೆ ಸೇರುತ್ತದೆ. ಸದ್ಯ ಕರ್ನಾಟಕ ಅಷ್ಟೇ ಅಲ್ಲದೇ ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶದ ರೈತರ ಮೊಗದಲ್ಲೂ ಸಹ ಮಹಾಮಳೆಯು ಮಂದಹಾಸ ತರಿಸಿದೆ.










