ಗೋಕಾಗ: ಮಂತ್ರಿಯೊಬ್ಬರ ಮುಖ್ಯಮಂತ್ರಿಯಾಗುವ ಮಹತ್ಕಾಕಾಂಕ್ಷೆ ಅವರ ಹಿಂಬಾಲಕರ ಮೂಲಕ ಬಹಿರಂಗವಾಗಿ ವ್ಯಕ್ತವಾಗಬಹುದು. ರಾಜಕಾರಣದಲ್ಲಿ ದಶಕಗಳ ಕಾಲ ವಿರೋಧಿಗಳೆನಿಸಿದವರು ತಮ್ಮ ‘ವೈಯಕ್ತಿಕ ರಾಜಕೀಯ’ವನ್ನು ಮೀರಿ ಪರಸ್ಪರ ಕೈಜೋಡಿಸಬಹುದು, ಒಬ್ಬ ನಾಯಕ ತನ್ನ ವೈಯಕ್ತಿಕ ನಂಬಿಕೆಗಳನ್ನು ತಾತ್ಕಾಲಿಕವಾಗಿ ಪಕ್ಕಕ್ಕೆ ಇಟ್ಟು ಜನರ ಭಾವನೆಗಳನ್ನು ಗೌರವಿಸಬಹುದು, ನಂಬಿಕೆ ಮತ್ತು ಮೂಢನಂಬಿಕೆಗಳ ವ್ಯತ್ಯಾಸವನ್ನು ತನ್ನ ನಡೆವಳಿಕೆಯಿಂದಲೇ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಬಹುದು, ಊರ ಅಭಿವೃದ್ಧಿಯ ಕುರಿತು ಚಿಂತನೆ ನಡೆಯಬಹುದು.
ಹೀಗೆ ಒಂದು ಗ್ರಾಮದೇವತೆಯ ಜಾತ್ರೆಯಲ್ಲಿ ಏನೇನು ನಡೆಯಬಹುದು ಎಂಬುದಕ್ಕೆ ಶುಕ್ರವಾರ ಗೋಕಾಕ ಸಾಕ್ಷಿಯಾಯಿತು. ಹತ್ತು ವರ್ಷಗಳ ನಂತರ ಅದ್ಧೂರಿಯಾಗಿ ನಡೆಯುತ್ತಿರುವ ಗೋಕಾಕ ಗ್ರಾಮದೇವಿಯ ರಥೋತ್ಸವ ಕಾರ್ಯಕ್ರಮ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಮಾರೋಪಗೊಳ್ಳುವುದರ ಜೊತೆಗೆ ಇಡೀ ಊರ ಮಂದಿ ತಮ್ಮ ಕಣ್ಣುಗಳನ್ನು ತಾವೇ ನಂಬದಂತಹ ಕೆಲವು ಘಟನೆಗಳಿಗೂ ವೇದಿಕೆಯಾಯಿತು.
ದೇವರು, ದೇವಸ್ಥಾನ, ಪೂಜೆ, ಪುನಸ್ಕಾರವೆಂದರೆ ಅಂತರ ಕಾಯ್ದುಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗ್ರಾಮದೇವತೆಯ ರಥೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರಲ್ಲದೇ ದೇವಿಗೆ ಕೈ ಮುಗಿಯುವ ಮೂಲಕ ತಮ್ಮ ವಿರೋಧ ಇರುವುದು ಮೂಢ ನಂಬಿಕೆಗಳಿಗೆ ಮಾತ್ರವೇ ಹೊರತು ಜನರ ಭಾವನೆ, ನಂಬಿಕೆಗಳ ಬಗ್ಗೆ ಯಾವುದೇ ತಕರಾರು ಇಲ್ಲ ಎಂದು ಪರೋಕ್ಷವಾಗಿ ಸಂದೇಶ ಕೊಟ್ಟರು.
ಮೂಢ ನಂಬಿಕೆಗಳ ವಿರುದ್ಧ ಎಷ್ಟು ಸಾಧ್ಯವೋ ಅಷ್ಟು ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ನಿರಂತರವಾಗಿ ರೂಪಿಸುತ್ತಿರುವ ಅವರು, ಸ್ಥಳೀಯ ರಾಜಕಾರಣದಲ್ಲಿ ಸದಾ ತಮ್ಮನ್ನು ವಿರೋಧಿಸುವ ಅಶೋಕ್ ಪೂಜಾರಿ ಅವರ ಜೊತೆಗೆ ಕೈಕುಲುಕಿ ಅವರೊಂದಿಗೇ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ಮಾತ್ರ ಅನೇಕರಿಗೆ ಆಶ್ಚರ್ಯ ಉಂಟು ಮಾಡಿತ್ತು. ‘ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ’ ಎಂಬ ಅವರ ಬೆಂಬಲಿಗರ ಘೋಷಣೆಯೂ ಮುಗಿಲು ಮುಟ್ಟಿತ್ತು.
ಅಷ್ಟೇ ಅಲ್ಲ, ಗೋಕಾಕದಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿರುವ ಅಶೋಕ್ ಪೂಜಾರಿ ಅವರ ಮನೆಗೆ ಸತೀಶ್ ಜಾರಕಿಹೊಳಿ ಅವರ ಪುತ್ರಿ, ಸಂಸದೆ ಪ್ರಿಯಾಂಕ್ ಜಾರಕಿಹೊಳಿ ಮತ್ತು ಸಹೋದರ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದೂ ಸಹ ಈ ಜಾತ್ರೆಯ ಸಂದರ್ಭದಲ್ಲಿ ನಡೆದ ಹಲವು ವಿಶೇಷಗಳಲ್ಲಿ ಒಂದು. ಅಶೋಕ್ ಪೂಜಾರಿ ಅವರ ಮನೆ ಇರುವ ಓಣಿಯಲ್ಲಿಯೇ ಗ್ರಾಮ ದೇವತೆಯನ್ನು ಪ್ರತಿಷ್ಠಾಪಣೆ ಮಾಡ್ಲಾಗುತ್ತದೆ.
ಗ್ರಾಮದೇವಿ ಜಾತ್ರೆಯೇನೋ ಅದ್ಧೂರಿಯಾಗಿ ನಡೆಯಿತು, ತಾತ್ಕಾಲಿಕವಾದರೂ ಸರಿ, ಮುಖಂಡರೂ ವೈಮನಸ್ಸು ಮರೆತು ಒಂದಾದರು. ಆದರೆ, ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಆಗದ ಗೋಕಾಕ ನಗರದ ಅಭಿವೃದ್ಧಿಯ ಬಗ್ಗೆ ಜನರ ಗೊನಗಾಟದ ಅಂತ್ಯಕ್ಕೂ ಈ ಜಾತ್ರೆ ಮುನ್ನುಡಿ ಬರೆದರೆ ಎಷ್ಟು ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯವೂ ಜನರಿಂದ ವ್ಯಕ್ತವಾಗುತ್ತಿತ್ತು.
ಗೋಕಾಕದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ನಾವಂದುಕೊಂಡಷ್ಟು ಪ್ರಮಾಣದಲ್ಲಿ ನಡೆಯುತ್ತಿಲ್ಲ, ಗೋಕಾಕ ಜಿಲ್ಲಾ ಕೇಂದ್ರವಾಗಬೇಕು ಎಂಬ ಕನಸೂ ನನಸಾಗಿಲ್ಲ, ರಾಜಕೀಯವಾಗಿ ಇಡೀ ಕರ್ನಾಟಕದಲ್ಲೇ ಅತ್ಯಂತ ಶಕ್ತಿಶಾಲಿ ತಾಲೂಕು ಎನಿಸಿರುವ ಗೋಕಾಕದಲ್ಲಿ ಈಗಲೂ ಒಂದು ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಇಲ್ಲ. ಈ ಎಲ್ಲ ಕೆಲಸಗಳಿಗೂ ಈ ಜಾತ್ರೆ ಚಾಲನೆ ಕೊಡುವಂತಾದರೆ, ಎಲ್ಲ ಮುಖಂಡರೂ ಗ್ರಾಮದೇವಿಯ ಜಾತ್ರೆಯಂತೆಯೇ ಅಭಿವೃದ್ಧಿ ವಿಚಾರದಲ್ಲೂ ಒಂದಾದರೆ ಗೋಕಾಕ ಜನರ ದಶಕಗಳ ಕನಸು ಶೀಘ್ರವೇ ನನಸಾಗುವುದರಲ್ಲಿ ಸಂಶಯವೇ ಇಲ್ಲ.



