ಬೆಳಗಾವಿ ನಗರದ ಎಸಿ ಕಚೇರಿಯ ಗ್ರೇಡ್- 2 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ‌್ ಮಣ್ಣಿಕೇರಿ ಜೂನ್ 29ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಇದೀಗ ತಹಶೀಲ್ದಾರ್ ಅಶೋಕ ಮಣ್ಣಿಕೇರಿ ಸಾವು ಪ್ರಕರಣ ತಿರುವು ತೆಗೆದುಕೊಂಡಿದೆ.
ಅಶೋಕ ಮಣ್ಣಿಕೇರಿ ಸಾವಿಗೂ ಮುನ್ನ ಬರೆದಿಟ್ಟಿದ್ದ ಮಹತ್ವದ ಪತ್ರ ಸೇರಿ ಇತರೆ ದಾಖಲೆಗಳನ್ನು ಕ್ಯಾಂಪ್ ಪೊಲೀಸರು ಸೀಜ್ ಮಾಡಿದ್ದಾರೆ. ಬೆಳಗಾವಿ ಎಸಿ ಕಚೇರಿಯ ಲಾಕರ್ ಪರಿಶೀಲನೆ ವೇಳೆ ವೈಯಕ್ತಿಕ ದಾಖಲೆಗಳು ಪತ್ತೆಯಾಗಿವೆ. ಈ ವೇಳೆ ಜೂನ್ 20ರಂದು ಬರೆದಿಟ್ಟಿದ್ದ ಪತ್ರವೂ ಪರಿಶೀಲನೆ ವೇಳೆ ಪೊಲೀಸರಿಗೆ ಸಿಕ್ಕಿದ್ದು, ಪತ್ನಿ ಭೂಮಿ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಅಶೋಕ್ ಮಣ್ಣಿಕೇರಿ ಉಲ್ಲೇಖಿಸಿದ್ದಾರೆ.
ತಹಶಿಲ್ದಾರ್ ಹುದ್ದೆಗೆ ಸ್ವಯಂ ನಿವೃತ್ತಿ ಪಡೆಯಲು ಸಿದ್ದಪಡಿಸಿದ್ದ ಪತ್ರ ಕೂಡ ಇದೆ ವೇಳೆ ಪತ್ತೆಯಾಗಿದೆ. ಇನ್ನು ಜೂನ್ 29ರಂದು ಮನೆಯಲ್ಲಿ ಹೃದಯಾಘಾತದಿಂದ ಸಾವು ಎಂದು ಪ್ರಕರಣ ಬೆಳಕಿಗೆ ಬಂದಿತ್ತು. ಅಶೋಕ್ ಮಣ್ಣಿಕೇರಿ ಕುಟುಂಬಸ್ಥರಿಂದ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪತ್ನಿ ಭೂಮಿ ಹಾಗೂ ಪತ್ನಿಯ ಸಹೋದರ ಸ್ಯಾಮುವಲ್ ವಿರುದ್ಧ ಕೇಸ್ ದಾಖಲಿಸಿದ್ದರು. ಇನ್ನು ಮರಣೋತ್ತರ ಹಾಗೂ ಎಫ್ಎಸ್ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.







