ಬೆಳಗಾವಿ: ಆಡಳಿತಾರೂಢ ಬಿಜೆಪಿಯಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಅಸಮಾಧಾನ ಸ್ಪೋಟಗೊಂಡಿದ್ದು, ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮಹೇಶ್ ಕುಮಟಹಳ್ಳಿಗೆ ಟಿಕೆಟ್ ನೀಡಿದರೆ ಫಲಿತಾಂಶದಲ್ಲಿ ಹಿನ್ನಡೆಯಾಗಬಹುದೆಂದು ಖುದ್ದು ಆಕಾಂಕ್ಷಿಯಾಗಿರುವ ಲಕ್ಷ್ಮಣ್ ಸವದಿಯೇ ಆತಂಕ ವ್ಯಕ್ತಪಡಿಸಿದ್ದಾರೆ.
ಫಲಿತಾಂಶದ ಬಗ್ಗೆ ನಾನು ಖಚಿತವಾಗಿ ಏನೂ ಹೇಳಲೂ ಆಗುವುದಿಲ್ಲ. ಆದರೆ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಹಿನ್ನಡೆಯಾಗಬಹುದು. ಅವರ ಸೋಲನ್ನು ನನ್ನ ತಲೆಗೆ ಕಟ್ಟುವ ಪ್ರಯತ್ನ ನಡೆದಿದೆ ಎಂದು ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿರುವ ವಾಸ್ತವ ಸ್ಥಿತಿಯನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಇಷ್ಟಕ್ಕೂ ಮೀರಿ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಬೆಳಗಾವಿ ಜಿಲ್ಲೆಯ ಮತ್ತೊಂದು ಕ್ಷೇತ್ರವಾದ ಹುಕ್ಕೇರಿಯಲ್ಲಿ ಚಿಕ್ಕಪ್ಪ ಹಾಗೂ ಸಹೋದರನ ಮಗನ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಉಮೇಶ್ ಕತ್ತಿ ಅವರ ಪುತ್ರ ನಿಖಿಲ್ ಕತ್ತಿ ಹುಕ್ಕೇರಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಇಬ್ಬರೂ ಕೂಡ ಪ್ರಚಾರ ಆರಂಭಿಸಿದ್ದು, ಪಕ್ಷದ ನಾಯಕರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಖಾನಾಪೂರ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆದಿದ್ದು ಅರವಿಂದ ಪಾಟೀಲ ಹಾಗೂ ವಿಠ್ಠಲ ಹಲಗೇಕರ ಇವರಿಬ್ಬರಲ್ಲಿ ಒಬ್ಬರಿಗೂ ಟಿಕೆಟ್ ಮಿಸ್ ಆದರೆ ಎಂಇಎಸ್ ನಿಂದ ಸ್ಪರ್ಧೆ ಮಾಡಲಿದ್ದಾರೆಂದು ಕ್ಷೇತ್ರದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಬೆಳಗಾವಿ ಜಿಲ್ಲೆ ಬಿಜೆಪಿಗೆ ತೆಲೆನೋವಾಗಲಿದೆ ಎಂದು ರಾಜಕೀಯ ವಿಶ್ಲೇಷಕರ ಮಾತು









