


ಬೆಳಗಾವಿ:
ಮಹಾರಾಷ್ಟ್ರದಲ್ಲಿ ಮಹಾ ಮಳೆ ಮುಂದುವರೆದ ಪರಿಣಾಮ ಪಶ್ಚಿಮ ಘಟ್ಟಪ್ರದೇಶದಲ್ಲಿ ಸುರಿದ ಭಾರಿ ಮಳೆಯ ನೀರು ರಾಜ್ಯದತ್ತ ಬರುತ್ತಿದೆ. ಸದ್ಯ ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ಹಾಗೂ ದೂಧಗಂಗಾ ವೇದಗಂಗಾ ನದಿಗಳು ಅಪಾಯದ ಮಟ್ಟ ತಲುಪಿವೆ. ಸದ್ಯ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಚಿಕ್ಕೋಡಿ ತಾಲೂಕಿನ ವೇದಗಂಗಾ ದೂಧಗಂಗಾ ಒಳಹರಿವಿನ ಪ್ರಮಾಣದಲ್ಲೂ ಹೆಚ್ಚಳವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿರುವ ದತ್ತ ಮಂದಿರಕ್ಕೆ ಕೃಷ್ಣಾ ನದಿ ನೀರು ನುಗ್ಗಿದ್ದು ದೇವಸ್ಥಾನ ಭಾಗಶಃ ಜಲಾವೃತವಾಗಿದೆ.ಕೃಷ್ಣಾ ನದಿಗೆ ಕಲ್ಲೋಳ ಬ್ಯಾರೇಜ್ ಬಳಿ 1 ಲಕ್ಷ 30 ಸಾವಿರ ಕ್ಯೂಸೇಕ್ ನಷ್ಟು ಒಳಹರಿವು ದಾಖಲಾಗಿದೆ.
ಈಗಾಗಲೇ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ 6 ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಸದ್ಯ ವಾಹನ ಸವಾರರು ಪರ್ಯಾಯ ಮಾರ್ಗ ಮೂಲಕ ಸಂಚಾರ ಮಾಡುತ್ತಿದ್ದಾರೆ.ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಹೆಚ್ಚಿದ್ದು ನದಿ ತೀರಕ್ಕೆ ಇಳಿಯದಂತೆ ಚಿಕ್ಕೋಡಿ ತಾಲೂಕು ಆಡಳಿತ ಹಾಗೂ ಬೆಳಗಾವಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.










