

ಬೆಳಗಾವಿ: ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಹಾಗೂ ಕ್ರಷರ್ ಮಾಲೀಕರು ತಮ್ಮನ್ನು ಭೇಟಿ ಮಾಡಲು ಬಂದಿದ್ದರು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಹಾಗೂ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿರುವ ಬಗ್ಗೆ ಸಮಸ್ಯೆಗಳನ್ನು ತಿಳಿಸಿದ್ದರು. ಕೆಲ ದಿನಗಳ ಹಿಂದೆ ಬಾಳೆಕುಂದರಗಿ ಬಳಿ ರೈತರು ಪ್ರತಿಭಟನೆ ನಡೆಸಿದ್ದರು. ಇದೇ ಹಿನ್ನೆಲೆಯಲ್ಲಿ ಕ್ರಷರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ವಿಚಾರವಾಗಿ ಮಾತನಾಡಲು ಹೆಸ್ಕಾಂ ಸಿಬ್ಬಂದಿಯನ್ನು ಕರೆಸಲಾಗಿತ್ತು. ನೋಟಿಸ್ ನೀಡಿ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸಿಬ್ಬಂದಿಗೆ ತಿಳಿಸಿದ್ದಾಗಿ ಚನ್ನರಾಜ ಹಟ್ಟಿಹೊಳಿ ಹೇಳಿದರು.
“ಹೆಸ್ಕಾಂ ಸಿಬ್ಬಂದಿಗೆ ಬುದ್ಧಿವಾದ ಹೇಳಿದ್ದು ನಿಜ. ಆದರೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ ಯಾವುದೇ ಅಧಿಕಾರಿ ಅಥವಾ ಸಾಮಾನ್ಯ ಜನರಿಗೆ ಬೈದಿಲ್ಲ. ಅಸಂವಿಧಾನಿಕ ಪದಗಳನ್ನು ಬಳಸಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಸುಮಾರು 50ರಿಂದ 60 ಜನರ ಸಮ್ಮುಖದಲ್ಲೇ ಮಾತುಕತೆ ನಡೆದಿದ್ದು, ಬುದ್ಧಿವಾದ ಹೇಳುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಸಿಬ್ಬಂದಿಯ ಮನಸ್ಸಿಗೆ ನೋವಾಗಿದ್ದರೆ ತಮ್ಮೊಂದಿಗೆ ಮಾತನಾಡಬೇಕಿತ್ತು ಎಂದರು.
“ನಮ್ಮನ್ನು ಭೇಟಿ ಮಾಡಲು ಬಂದವರ ಸಮಸ್ಯೆ ಕುರಿತು ಮಾತನಾಡಲು ಸಿಬ್ಬಂದಿಯನ್ನು ಕರೆದಿದ್ದು, ಮಾತನಾಡಿದ್ದು ನಿಜ. ಆದರೆ ಹಲ್ಲೆ ಮಾಡಿಲ್ಲ. ಅವರು ಮಾಡಿರುವ ಆರೋಪ ಶುದ್ಧ ಸುಳ್ಳು,” ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಹೆಸ್ಕಾಂ ಸಿಬ್ಬಂದಿಯಿಂದ ವಸೂಲಿ ಮಾಡುವುದು ಸರಿಯಾಗಿದೆ ಎಂದು ಹೇಳುತ್ತಿಲ್ಲ. ಈ ವಿಚಾರದಲ್ಲಿ ಸಿಬ್ಬಂದಿಯೊಂದಿಗೆ ಕುಳಿತು ಮಾತನಾಡಲು ತಾವು ಸಿದ್ಧರಿರುವುದಾಗಿ ಅವರು ಹೇಳಿದರು. “ಅವರ ಜೊತೆ ಮಾತನಾಡಿದ್ದು ಕೇವಲ ಐದು ನಿಮಿಷ. ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ಸಿಬ್ಬಂದಿ ತಮ್ಮ ಕೆಲಸವನ್ನು ಮಾಡಬೇಕು,” ಎಂದು ಹೆಸ್ಕಾಂ ಸಿಬ್ಬಂದಿಗೆ ಮನವಿ ಮಾಡಿದರು.
ಹಲ್ಲೆ ಆರೋಪದ ಕುರಿತು ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಮಾತನಾಡುವುದಾಗಿ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.










