Uncategorized

ಎಮ್ಮೆ ಹಾಲು ನಮಗೆ ಕೊಡಿ ನಾನು ನಿಮಗೆ ಇನ್ನಷ್ಟು ಸೌಲಭ್ಯ ಕೊಡ್ತಿನಿ!ಬಾಲಚಂದ್ರ ಜಾರಕಿಹೊಳಿ!

ಬೆಳಗಾವಿ: ಖಾಸಗಿ ಡೈರಿಗಳಿಗೆ ಎಮ್ಮೆ ಹಾಲು ಪೂರೈಸುವ ಬದಲು ಬೆಳಗಾವಿ ಹಾಲು ಒಕ್ಕೂಟಕ್ಕೆ ಕನಿಷ್ಠ ಶೇ.50ರಷ್ಟು ಎಮ್ಮೆ ಹಾಲು ನೀಡಿದರೆ ರೈತರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಬೆಮುಲ್ ಅಧ್ಯಕ್ಷ, ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ನಗರದ ಗಾಂಧೀ ಭವನದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸತತ ಎರಡನೇ ವರ್ಷವೂ ಬೆಮುಲ್ ಲಾಭದಲ್ಲಿದ್ದು, ಕಳೆದ ವರ್ಷ ₹13 ಕೋಟಿ ಹಾಗೂ ಪ್ರಸಕ್ತ ವರ್ಷ ₹12.59 ಕೋಟಿ ಲಾಭ ಗಳಿಸಲಾಗಿದೆ ಎಂದು ತಿಳಿಸಿದರು. ಒಕ್ಕೂಟಕ್ಕೆ ಬಂದ ಲಾಭವನ್ನು ತೆರಿಗೆ ರೂಪದಲ್ಲಿ ಪಾವತಿಸುವುದಕ್ಕಿಂತ ರೈತರ ಕಲ್ಯಾಣ ಯೋಜನೆಗಳ ಮೂಲಕ ಮತ್ತೆ ರೈತರಿಗೇ ಹಿಂದಿರುಗಿಸಲಾಗುತ್ತಿದೆ ಎಂದರು.

ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಒಕ್ಕೂಟ ವ್ಯಾಪ್ತಿಯ 669 ಹಾಲು ಉತ್ಪಾದಕರ ಸಂಘಗಳ ಪೈಕಿ 215 ಸಂಘಗಳು ಇದುವರೆಗೆ ಒಂದು ಲೀಟರ್ ಎಮ್ಮೆ ಹಾಲನ್ನೂ ಬೆಮುಲ್‌ಗೆ ಪೂರೈಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಮ್ಮೆ ಹಾಲು ಖಾಸಗಿ ಸಂಸ್ಥೆಗಳಿಗೆ ಹೋಗುತ್ತಿರುವುದರಿಂದ ಮೊಸರು, ತುಪ್ಪ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಒಕ್ಕೂಟಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಸಂಘಗಳು ಮತ್ತು ರೈತರು ಕನಿಷ್ಠ ಶೇ.50ರಷ್ಟು ಎಮ್ಮೆ ಹಾಲನ್ನು ಬೆಮುಲ್‌ಗೆ ಪೂರೈಸಬೇಕು ಎಂದು ಮನವಿ ಮಾಡಿದರು.

ರೈತರಿಗೆ ಘೋಷಿಸಿದ್ದ ₹1 ಲಕ್ಷ ವಿಮಾ ಯೋಜನೆ ಜಾರಿಗೊಳಿಸಲು ವಿಮಾ ಕಂಪನಿಗಳು 70 ವರ್ಷ ಮೇಲ್ಪಟ್ಟ ಸದಸ್ಯರಿಗೆ ವಿಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು. ಅದರ ಬದಲಿಗೆ ರೈತ ಕಲ್ಯಾಣ ನಿಧಿಯಿಂದ ಹಾಲು ಪೂರೈಸುವ ಸದಸ್ಯರ ನಿಧನಕ್ಕೆ ₹60 ಸಾವಿರ ಹಾಗೂ ಹಾಲು ಪೂರೈಸದ ಸದಸ್ಯರ ಕುಟುಂಬಕ್ಕೆ ₹25 ಸಾವಿರ ನೆರವು ನೀಡುವ ಹೊಸ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಬೆಮುಲ್ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳನ್ನು ಸಭೆಯಲ್ಲಿ ಪ್ರಕಟಿಸಲಾಯಿತು. 2026-27 ಮತ್ತು 2027-28ನೇ ಸಾಲಿನಲ್ಲಿ 30 ಸಾವಿರ ರಬ್ಬರ್ ಮ್ಯಾಟ್‌ಗಳ ವಿತರಣೆ, 400 ಮೇವು ಕತ್ತರಿಸುವ ಯಂತ್ರಗಳು, 100 ಮಿಲ್ಕಿಂಗ್ ಯಂತ್ರಗಳು, 15 ಹೊಸ ಬಲ್ಕ್ ಮಿಲ್ಕ್ ಕೂಲರ್‌ಗಳ ಸ್ಥಾಪನೆ, 150 ಬಯೋಗ್ಯಾಸ್ ಘಟಕಗಳ ನಿರ್ಮಾಣ, 100 ಹೊಸ ಹಾಲು ಉತ್ಪಾದಕರ ಸಂಘಗಳಿಗೆ ಡಿಸಿಎಸ್ ಸಾಮಗ್ರಿಗಳ ವಿತರಣೆ, ಹೊಸ ಕಟ್ಟಡ ನಿರ್ಮಿಸಿರುವ 40 ಸಂಘಗಳಿಗೆ ತಲಾ ₹5 ಲಕ್ಷ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಮೀಸಲಿಡಲಾಗಿದೆ.

ಪ್ರಸ್ತುತ ಲೀಸ್‌ನಲ್ಲಿರುವ 25 ಎಕರೆ ಜಾಗವನ್ನು ಸರ್ಕಾರದಿಂದ ಖರೀದಿಸಿ ಅತ್ಯಾಧುನಿಕ ಮೆಗಾ ಡೈರಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ಡೈರಿಯಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಆಕಳ ಹಾಲಿನ ಖರೀದಿ ದರವನ್ನು ₹29.10ರಿಂದ ₹34ಕ್ಕೆ ಹಾಗೂ ಎಮ್ಮೆ ಹಾಲಿನ ದರವನ್ನು ₹41.60ರಿಂದ ₹50ಕ್ಕೆ ಹೆಚ್ಚಿಸಲಾಗಿದೆ. ರೈತರಿಗೆ ಹತ್ತು ದಿನಕ್ಕೊಮ್ಮೆ ಬಿಲ್ ಪಾವತಿ ವ್ಯವಸ್ಥೆ ಮುಂದುವರಿಯಲಿದ್ದು, ದರವನ್ನು ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
2025-26ನೇ ಸಾಲಿನಲ್ಲಿ ಬೆಮುಲ್ ವ್ಯಾಪಾರ ವಹಿವಾಟು ₹515.15 ಕೋಟಿಗೆ ಏರಿಕೆಯಾಗಿದ್ದು, ₹2.64 ಕೋಟಿ ನಿವ್ವಳ ಲಾಭ ಗಳಿಸಿದೆ. ಹಾಲು ಉತ್ಪಾದಕರ ಸಂಘಗಳು ಮತ್ತು ಸದಸ್ಯರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ₹13 ಕೋಟಿ, ಮಾರಾಟ ಅಭಿವೃದ್ಧಿಗೆ ₹2.50 ಕೋಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ₹4.50 ಕೋಟಿ ಸೇರಿದಂತೆ ಹಲವು ಯೋಜನೆಗಳನ್ನು ಅನುಮೋದಿಸಲಾಗಿದೆ. ಕಬ್ಬಿನ ಜೊತೆಗೆ ಹೈನುಗಾರಿಕೆಯೂ ರೈತರ ಆರ್ಥಿಕ ಆಧಾರವಾಗಬೇಕು. ಬೆಮುಲ್ ಇನ್ನಷ್ಟು ಬೆಳೆಯಲು ರೈತರ ಸಹಕಾರವೇ ಮುಖ್ಯ. ರೈತರ ಹಿತಾಸಕ್ತಿಯೇ ನಮ್ಮ ಆಡಳಿತ ಮಂಡಳಿಯ ಪ್ರಮುಖ ಗುರಿ ಆಗಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

TV24 News Desk
the authorTV24 News Desk

Leave a Reply

error: Content is protected !!