



ಬೆಳಗಾವಿ:
ನಮ್ಮೂರಲ್ಲಿ ಮೊದಲು ದಾಬಾ ಅಂತ ಶುರು ಮಾಡಿ ಈಗ ಅದರಲ್ಲಿಯೇ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೋರಾಪುರ ಗ್ರಾಮದ ಮಹಿಳೆಯರು ಹಾಗೂ ನಾಗರೀಕರು ಬೆಳಗಾವಿಯ ಅಬಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕೋರಾಪುರ ಗ್ರಾಮದಲ್ಲಿ ಕೃಷ್ಣಾ ಕಲಾಲ್ ಎಂಬುವವರು ಮೊದಲು ದಾಬಾ ಅಂತ ಶುರು ಮಾಡಿ ನಂತರ ಅಲ್ಲಿಯೇ ಈಗ ಸಾರಾಯಿ ಮಾರಾಟ ಮಾಡುತ್ತಿದ್ದಾರೆ.ಇದರಿಂದ ನಮ್ಮೂರಿನ ಸ್ವಾಸ್ಥ್ಯ ಹಾಳಾಗುತ್ತಿದೆ. ಗ್ರಾಮದಲ್ಲಿ ಯುವಕರು ಹಾಗೂ ಸಣ್ಣ ವಯಸ್ಸಿನ ಮಕ್ಕಳೂ ಸಹ ಕುಡಿತದ ದಾಸರಾಗಿದ್ದಾರೆ. ಊರಲ್ಲಿ ಬಾರ್ ಇರುವ ಕಾರಣದಿಂದ ಹಾಗೂ ನಮ್ಮ ಮಕ್ಕಳು ಕುಡಿದು ಹಾಳಾಗುತ್ತಿರುವುದರಿಂದ ನಮ್ಮೂರಿಗೆ ಹೆಣ್ಣೂ ಸಹ ಯಾರೂ ಕೊಡುತ್ತಿಲ್ಲ. ಹೀಗಾಗಿ ನಮ್ಮೂರಲ್ಲಿ ನಡೆಯುತ್ತಿರುವ ಅನಧಿಕೃತ ಬಾರ್ ಬಂದ್ ಮಾಡಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಇನ್ನು ಗ್ರಾಮದ ಮಹಿಳೆಯೋರ್ವರು ಮಾತನಾಡಿ ನನ್ನ ಯಜಮಾನ ಕುಡಿತದ ದಾಸನಾಗಿ 25 ನೇ ವಯಸ್ಸಿಗೆ ತೀರಿ ಹೋದ ಈಗ ನನಗೆ ಮೂರು ಹೆಣ್ಣು ಮಕ್ಕಳು ಮನೆಯ ಜವಾಬ್ದಾರಿಗಳ ಜೊತೆಗೆ ಆ ಹೆಣ್ಣು ಮಕ್ಕಳ ಆರೈಕೆಯೂ ಸಹ ನನ್ನ ಮೇಲೆಯೇ ಬಿದ್ದಿದೆ. ಊರಲ್ಲಿರುವ ಅನಧಿಕೃತ ಬಾರ್ ನಿಂದಲೇ ಇಷ್ಟೆಲ್ಲ ಅನಾಹುತಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಇನ್ನು ಸರ್ಕಾರ ಮಹಿಳೆಯರ ಕಲ್ಯಾಣಕ್ಕಾಗಿ ನೀಡುತ್ತಿರುವ ಗೃಹಲಕ್ಷ್ಮೀ ಹಣವನ್ನೂ ಸಹ ಮನೆಯಲ್ಲಿ ನಮ್ಮ ಪತಿರಾಯರು ಬಿಡುತ್ತಿಲ್ಲ ಕುಡಿತದ ಚಟದಿಂದ ಹಣ ಜಮೆಯಾಗುತ್ತಿದ್ದಂತೆ ಅವರೇ ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ನಮಗೆ ದಿಕ್ಕೇ ತೋಚದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಊರಲ್ಲಿರುವ ಅನಧಿಕೃತ ಬಾರ್ ಆಗಿದ್ದು ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಊರಲ್ಲಿ ನಡೆಯುತ್ತಿರುವ ಅನಧಿಕೃತ ಬಾರ್ ಬಂದ್ ಮಾಡಿಸುವಂತೆ ಮನವಿ ಮಾಡಿದರು. ಇನ್ನು ಗ್ರಾಮಸ್ಥರ ಮನವಿ ಸ್ವೀಕರಿಸಿದ ಅಬಕಾರಿ ಅಧಿಕಾರಿಗಳು ಊರಿಗೆ ಶೀಘ್ರದಲ್ಲಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.









