

ಆಸ್ತಿ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಜಗಳ ನಡೆದು ಕಡೆಗೆ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ರಾಜು ಸಿದ್ದಪ್ಪ ರುದ್ರಪ್ಪಗೋಳ(45) ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಆರೋಪಿಯನ್ನು ಆತನ ಒಡಹುಟ್ಟಿದ ಅಣ್ಣ ಸಂಜು ಸಿದ್ದಪ್ಪ ರುದ್ರಪ್ಪಗೋಳ(49) ಎಂದು ಗುರುತಿಸಲಾಗಿದೆ. ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿದ್ದ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಸಂಜು ತನ್ನ ತಮ್ಮ ರಾಜುನನ್ನು ಕತ್ತು ಹಿಸುಕಿ ನಂತರ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಅಂಕಲಗಿಯಲ್ಲಿರುವ ಮಠಕ್ಕೆ ಹೋಗಿ ಅಲ್ಲಿಯೇ ಇದ್ದ ಎನ್ನಲಾಗಿದೆ. ಅಣ್ಣ ತಮ್ಮಂದಿರು ತಮ್ಮ ಊರು ಘೋಡಗೇರಿಯನ್ನು ಬಿಟ್ಟು ಅಂಕಲಗಿಯಲ್ಲಿರುವ ಸರ್ಕಾರಿ ಹಳೆಯ ಹಾಳು ಬಿದ್ದ ಬಂಗಲೇಯಲ್ಲಿ ವಾಸವಿದ್ದರು ಎನ್ನಲಾಗಿದೆ.ಸಂಜು ರಾಜುವನ್ನು ಕೊಲೆ ಮಾಡಿ ನಂತರ ಆತನ ಶವವನ್ನು ಅಲ್ಲಿಯೇ ಬಿಟ್ಟು ಮಠವೊಂದಕ್ಕೆ ಹೋಗಿ ಅಲ್ಲಿಯೇ ಇದ್ದ ಎನ್ನಲಾಗಿದೆ. ಯಾವಾಗ ರಾಜುವಿನ ಮೃತದೇಹ ವಾಸನೆ ಬರಲು ಶುರುವಾಯ್ತೋ ಆಗ ಸ್ಥಳೀಯರು ಬಂದು ಗಮನಿಸಿದಾಗ ಅಲ್ಲಿ ರಾಜು ಹೆಣವಾಗಿದ್ದು ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿದಿದೆ. ನಂತರ ಪೊಲೀಸರು ಬಂದು ತನಿಖೆ ನಡೆಸಿ ಕೊಲೆ ಮಾಡಿ ಮಠ ಸೇರಿದ್ದ ಪಾಪಿ ಅಣ್ಣ ಸಂಜುವನ್ನು ಹೆಡೆಮುರಿ ಕಟ್ಟಿದ್ದಾರೆ. ಈ ಕುರಿತು ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








