ಬೆಳಗಾವಿ

ಬಿಜೆಪಿಗೆ ರಾಜೀನಾಮೆ ನೀಡಿದ ಡಾ. ವಿಶ್ವನಾಥ ಪಾಟೀಲ್‌

ಬೆಳಗಾವಿ: ಬೈಲಹೊಂಗಲ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಬೇಸರಗೊಂಡ ಡಾ. ವಿಶ್ವನಾಥ ಪಾಟೀಲ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅವರೊಂದಿಗೆ ಪಕ್ಷದ ಮಂಡಲ ಅಧ್ಯಕ್ಷ ಸೇರಿದಂತೆ 600ಕ್ಕೂ ಹೆಚ್ಚು ಸದಸ್ಯರು ಕೂಡ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
 
ಪಟ್ಟಣದಲ್ಲಿ ಬುಧವಾರ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಡಾ. ವಿಶ್ವನಾಥ, ‘ಬಿಜೆಪಿ ಕಾರ್ಯಕರ್ತನಾಗಿ, ಜಿಲ್ಲಾ ಘಟಕದ ಆಧ್ಯಕ್ಷನಾಗಿ ಸಾಕಷ್ಟು ದುಡಿದಿದ್ದೇನೆ. ಯಡಿಯೂರ‍ಪ್ಪ ಅವರು ಕೆಜೆಪಿ ಕಟ್ಟಿದ್ದಾಗ, ಅವರೊಂದಿಗೆ ಹೋಗಿ ಶಾಸಕನಾಗಿ ಸಾಮರ್ಥ್ಯ ತೋರಿಸಿದ್ದೇನೆ. ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಮತ್ತೆ ಬಿಜೆಪಿ ಬಂದಿದ್ದೆ. ಇಷ್ಟೆಲ್ಲ ವಿಶ್ವಾಸ ಇಟ್ಟಿದ್ದಕ್ಕಾಗಿ ನನಗೆ ಟಿಕೆಟ್‌ ಕೊಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ನಂಬಿದವರನ್ನು ಕೈ ಬಿಟ್ಟಿದ್ದಾರೆ’ ಎಂದು ದೂರಿದರು.
 
‘ಸೋಮವಾರ ಸಂಜೆ ದೆಹಲಿಯಿಂದ ಫೋನ್‌ ಮಾಡಿದ ನಾಯಕರೊಬ್ಬರು ನನಗೇ ಟಿಕೆಟ್‌ ಖಾತ್ರಿಯಾಗಿದೆ ಎಂದು ಹೇಳಿದ್ದರು. ಆದರೆ, ಕೊನೆ ಕ್ಷಣದಲ್ಲಿ ಏಕೆ ಕೈಬಿಟ್ಟಿದ್ದಾರೆ ಎಂಬುದು ಗೊತ್ತಾಗಿಲ್ಲ. ಎರಡು ದಿನ ಕ್ಷೇತ್ರದಲ್ಲಿ ಸಂಚಾರ ಮಾಡಿ, ಜನಾಭಿಪ್ರಾಯ ಸಂಗ್ರಹಿಸಿ, ನಂತರ ಮುಂದಿನ ಹೆಜ್ಜೆ ಇಡುತ್ತೇನೆ’ ಎಂದೂ ಹೇಳಿದರು. ನನಗೆ ಟಿಕೆಟ್‌ ಸಿಗದ ಕಾರಣ ಅಭಿಮಾನಿಗಳೆಲ್ಲ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಪಕ್ಷದಲ್ಲಿ ನಾನೊಬ್ಬನೇ ಇದ್ದು ಏನು ಮಾಡಲಿ. ಹಾಗಾಗಿ, ನಾನೂ ಬಿಟ್ಟು ಹೊರಡುತ್ತೇನೆ’ ಎಂದರು.
 
ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ ಮಾತನಾಡಿ, ‘ಬೈಲಹೊಂಗಲ ಕ್ಷೇತ್ರದಲ್ಲಿ 96 ಸಾವಿರ ಪಂಚಮಸಾಲಿ ಸಮಾಜದವರು ಇದ್ದೇವೆ. ನಮ್ಮ ಸಮಾಜದ ನಾಯಕನಿಗೆ ಬಿಜೆಪಿ ಅನ್ಯಾಯ ಮಾಡಿದೆ. ಇದಕ್ಕೆ ತಕ್ಕ ಪಾಠ ಕಲಿಸಬೇಕು. ನಮ್ಮಲ್ಲಿ ಸ್ವಾಭಿಮಾನವಿದ್ದರೆ ಒಂದಾಗಿ ನಿಲ್ಲಬೇಕು’ ಎಂದರು.
 
TV24 News Desk
the authorTV24 News Desk

Leave a Reply