

ಬೆಳಗಾವಿ:
ಬಹುಕೋಟಿ ಹಣಕಾಸು ವಂಚನೆ ಪ್ರಕರಣದಲ್ಲಿ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ಆರೋಪಿ ಶಿವಾನಂದ್ ನೀಲಣ್ಣವರನನ್ನು ಇಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಆರೋಪಿ ಶಿವಾನಂದ ನೀಲಣ್ಣವರ್ ನನ್ನು ಇಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.ಅಲ್ಲದೇ ನ್ಯಾಯಾಲಕ್ಕೆ ಶಿವಾನಂದ ನೀಲಣ್ಣವರ ನನ್ನು ವಿಚಾರಣೆ ಮಾಡಲು ತಮ್ಮ ವಶಕ್ಕೆ ನೀಡುವಂತೆ ಇಡಿ ಅಧಿಕಾರಿಗಳು ಮನವಿ ಮಾಡಿದ್ದರು ಸದ್ಯ ನ್ಯಾಯಾಲಯ 12 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಶಿವಾನಂದ ನೀಲಣ್ಣವರ್ ಶಿವಂ ಅಸೋಸಿಯೇಟ್ಸ್ ಎಂಬ ಸಂಸ್ಥೆಯ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಹಾಗೂ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದ ಆರೋಪ ಎದುರಿಸುತ್ತಿದ್ದಾರೆ. ಸಾವಿರಾರು ಹೂಡಿಕೆದಾರರಿಂದ ಸಂಗ್ರಹಿಸಲಾದ ಕೋಟ್ಯಾಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪವೂ ಸಹ ಶಿವಾನಂದ ಮೇಲಿದೆ.ಹೂಡಿಕೆದಾರರು ಹೂಡಿಕೆ ಮಾಡಿದ ಹಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಅದಕ್ಕಾಗಿ ಮನಿ ಲಾಂಡರಿಂಗ್ ಕಾಯ್ದೆಯಡಿ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ಪ್ರಮುಖ ಆರೋಪಿ ಶಿವಾನಂದ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.ಈ ವೇಳೆ ಪ್ರಕರಣದ ಹಣಕಾಸು ವಹಿವಾಟಿನ ಸಂಪೂರ್ಣ ವಿವರ ಪತ್ತೆ ಹಚ್ಚುವುದು, ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಮೂಲ ಹಾಗೂ ಅದರ ವರ್ಗಾವಣೆಯ ಜಾಲವನ್ನು ಪತ್ತೆಹಚ್ಚುವುದು ಅಗತ್ಯವಾಗಿದೆ ಎಂದು ನ್ಯಾಯಾಲಯಕ್ಕೆ ಇಡಿ ಪರ ವಕೀಲರು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಅಲ್ಲದೇ ಆರೋಪಿಯ ವಿಚಾರಣೆಯಿಂದ ವಂಚನೆ ಪ್ರಕರಣದ ಹಿಂದೆ ಇರುವ ಇತರ ವ್ಯಕ್ತಿಗಳು ಹಾಗೂ ಹಣದ ವಹಿವಾಟಿನ ಕುರಿತು ಮಹತ್ವದ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ ವಕೀಲರು ವಾದಿಸಿದ್ದರು.ಸದ್ಯ
ಇಡಿ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಶಿವಾನಂದ್ ನನ್ನು 12 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಕಸ್ಟಡಿ ಅವಧಿಯಲ್ಲಿ ಆರೋಪಿಯಿಂದ ಶಿವಂ ಅಸೋಸಿಯೇಟ್ಸ್ ಮೂಲಕ ನಡೆದಿರುವ ಹಣಕಾಸು ವ್ಯವಹಾರಗಳು ಸೇರಿದಂತೆ ಹಣದ ವಹಿವಾಟು,ಮತ್ತು ಹೂಡಿಕೆದಾರರಿಂದ ಸಂಗ್ರಹಿಸಲಾದ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎನ್ನುವ ಪ್ರಶ್ನೆಗಳಿಗೆ ಇಡಿ ಅಧಿಕಾರಿಗಳು ಉತ್ತರ ಕಂಡುಕೊಳ್ಳಲಿದ್ದಾರೆ. ಅಲ್ಲದೇ ಹಣ ಹೂಡಲಾದ ಸಂಸ್ಥೆಗಳ ಕುರಿತು ಸಹ ಇಡಿ ತನಿಖೆ ನಡೆಸಲಿದೆ ಎನ್ನಲಾಗಿದೆ. ಶಿವಾನಂದ ನೀಲಣ್ಣವರ್ ಗೆ ಸಾಥ್ ನೀಡಿದ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಿವಾನಂದ ಆಪ್ತರು ಮತ್ತು ಅಧಿಕಾರಿಗಳ ವಿಚಾರಣೆಯನ್ನೂ ಸಹ ಇಡಿ ನಡೆಸಲಿದೆ ಎನ್ನಲಾಗಿದೆ.










