ಬೆಳಗಾವಿ:
ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಂಪುಟ ಸಚಿವಗಿರಿಯಿಂದ ಕೈ ಬಿಟ್ಟಿದ್ದರಿಂದ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಪ್ರತಿಭಟನೆ ನಡೆಸಿದರು. ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಕಾಂಗ್ರೇಸ್ ಕಾರ್ಯಕರ್ತರು ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಿಳೆಯಾಗಿ ಕಾಂಗ್ರೇಸ್ ಪಕ್ಷವನ್ನು ಕಟ್ಟಲು ಶ್ರಮಿಸಿದ್ದಾರೆ. ಜಿಲ್ಲೆಯ ಮಹಿಳಾ ಅಧ್ಯಕ್ಷೆಯಾಗಿ ಹಾಗೂ ಸಚಿವರಾಗಿ ಶಾಸಕಿಯಾಗಿ ಕಾಂಗ್ರೇಸ್ ಪಕ್ಷದ ಸಂಘಟನೆ ಮಾಡಲು ಸದಾ ಸನ್ನದ್ಧರಾಗಿದ್ದಾರೆ. ಅಂತವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳದವರನ್ನು ಹೈಕಮಾಂಡ್ ಮಂತ್ರಿ ಮಾಡುವ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಅಲ್ಲದೇ ಲಕ್ಷ್ಮೀ ಹೆಬ್ಬಾಳಕರ್ ಅವರ ಪರವಾಗಿ ಹಾಗೂ ಕಾಂಗ್ರೇಸ್ ಹೈಕಮಾಂಡ್ ವಿರುದ್ಧವಾಗಿ ದಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.













