



ಚಿಕ್ಕೋಡಿ:
ಗದ್ದೆಯಲ್ಲಿ ಬೆಳೆದಿದ್ದ ಮಶ್ರೂಮ್(ಅಣಬೆ)ಸೇವಿಸಿ ಒಂದೇ ಕುಟುಂಬದ 9 ಜನ ಅಸ್ವಸ್ಥರಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ ನಡೆದಿದ್ದು ಮಶ್ರೂಮ್ ತಿಂದು ವಾಂತಿ ಬೇಧಿಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.9 ಜನರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥಗೊಂಡವರಲ್ಲಿ ಓರ್ವ ಗರ್ಭಿಣಿ ಮಹಿಳೆಯೂ ಸಹ ಇದ್ದು ಆಕೆಯನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಜಿದ್ದಿಮನಿ ಹಾಗೂ ಕೋಳಿ ಕುಟುಂಬದ 9 ಸದಸ್ಯರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಹೊಲದಲ್ಲಿ ಬೆಳೆದಿದ್ದ ಮಶ್ರೂಮ್ ತಂದು ಮನೆಯಲ್ಲಿ ಅಡುಗೆ ಮಾಡಿದ್ದರು ಎನ್ನಲಾಗಿದೆ.
ಒಬ್ಬರು ಅನಬೆ ತಂದಿದ್ದನ್ನ ಕಂಡು ಮತ್ತೊಂದು ಕುಟುಂಬವೂ ಸಹ ಮಶ್ರೂಮ್ ಅಡುಗೆ ಮಾಡಿತ್ತು ಎನ್ನಲಾಗಿದೆ.ಹೊಲದಲ್ಲಿ ಬೆಳೆದಿದ್ದ ಮಶ್ರೂಮ್ ಗೆ ಔಷಧಿಯನ್ನು ಹೊಲದ ಮಾಲೀಕ ಹೊಡೆದಿದ್ದ ಎನ್ನಲಾಗಿದೆ.ಔಷದಿ ಹೊಡೆದಿದ್ದು ಗೊತ್ತಾಗದೆ ಮಶ್ರೂಮ್ ಅನ್ನು ಕುಟುಂಬಸ್ಥರು ಸೇವಿಸಿದ್ದಾರೆ.
ಊಟ ಮಾಡಿದ ಬಳಿಕ ವಾಂತಿ ಭೇದಿ ಶರುವಾಗಿ ಕುಟುಂಬಸ್ಥರು ಮನೆಯಲ್ಲೇ ನರಳಾಟ ನಡೆಸಿದ್ದಾರೆ.ಕೂಡಲೆ ಎಲ್ಲರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು
ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.









