ಬೆಳಗಾವಿ:




ಪರಸ್ತ್ರೀ ಸಂಘ ಪತ್ನಿಗೆ ತಿಳಿದಿದೆ ಆಕೆ ತನ್ನ ತವರಿನವರಿಗೆ ಹೇಳಿ ತನ್ನ ಮರ್ಯಾದೆ ಹಾಳು ಮಾಡುತ್ತಾಳೆ ಎಂದು ಭಾವಿಸಿ ಕಟ್ಟಿಕೊಂಡ ಪತ್ನಿಗೆ ಇಲ್ಲೊಬ್ಬ ಪಾಪಿ ಪತಿ ಚಟ್ಟ ಕಟ್ಟಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಆರೋಪಿಯನ್ನು ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಸಂತೋಷ್ ಪಟಾಯತ್ ಎಂದು ಗುರುತಿಸಲಾಗಿದ್ದು ಕೊಲೆಯಾದ ಮಹಿಳೆಯನ್ನು ಸಕ್ಕುಬಾಯಿ ಸಂತೋಷ್ ಪಟಾಯತ್ ಎಂದು ಗುರುತಿಸಲಾಗಿದೆ. ಸಂತೋಷ್ ಶಿಂಧಿಕುರಬೇಟ ಗ್ರಾಮದ ಮಹಿಳೆಯೊಬ್ಬಳೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.ಇದು ಕಳೆದ ಮೂರು ತಿಂಗಳ ಹಿಂದೆ ಸಂತೋಷ್ ಪತ್ನಿಗೆ ಗೊತ್ತಾಗಿತ್ತು ಇದೇ ವಿಷಯಕ್ಕಾಗಿಯೇ ಮನೆಯಲ್ಲಿ ಸಂತೋಷನೊಂದಿಗೆ ಆತನ ಪತ್ನಿ ಸಕ್ಕುಬಾಯಿ ಜಗಳವಾಡುತ್ತಿದ್ದಳು ಎನ್ನಲಾಗಿದೆ. ಇದಕ್ಕೆ ಒಂದು ಗತಿ ಕಾಣಿಸಬೇಕು ಎಂದು ಯೋಚಿಸಿ ಕೊಲೆಗೆ ಸಂಚು ರೂಪಿಸಿದ ಸರಸ ಸಂತೋಷ್ ಪತ್ನಿಯನ್ನು ಬೈಲಹೊಂಗಲದ ಮರಕುಂಬಿಯಲ್ಲಿರುವ ಚಾಮುಂಡೇಶ್ವರಿ ದರ್ಶನಕ್ಕೆಂದು ಕರೆದುಕೊಂಡು ಹೋಗಿ ದರ್ಶನ ಪಡೆದುಕೊಂಡು ವಾಪಸ್ ಬರುವಾಗ ದಾರಿ ಮದ್ಯೆ ಮುರುಗೋಡದಲ್ಲಿ ಕುಡಿಯಲು ತಂಪು ಪಾನೀಯ ತೆಗೆದುಕೊಂಡಿದ್ದಾನೆ. ನಂತರ ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಗೆ ಬರುವ ಶಿಲ್ತಿಭಾವಿ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಪಕ್ಕವೇ ದ್ವಿಚಕ್ರ ವಾಹನ ನಿಲ್ಲಿಸಿ ಹೆಂಡತಿಗೆ ತಂಪು ಪಾನೀಯದಲ್ಲಿ ವಿಷ ಬೆರೆಸಿ ಕುಡಿಯಲು ನೀಡಿದ್ದಾನೆ. ಅದನ್ನು ಪತ್ನಿ ಕುಡಿದ ಬಳಿಕ ಆಕೆಗೆ ವಾಂತಿ ಶುರುವಾಗಿದೆ, ಹೀಗಿರುವಾಗಲೇ ಸಂತೋಷ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆಕೆಯ ಮೇಲೆ ಬೈಕ್ ಬೀಳಿಸಿ ನಂತರ ತಾನೂ ಸಹ ಪ್ರಜ್ಞೆ ತಪ್ಪಿ ಬಿದ್ದವರ ಹಾಗೆ ನಾಟಕ ಮಾಡಿ ಬಳಿಕ 112 ಗೆ ಕರೆ ಮಾಡಿ ತಮಗೆ ಅಪಘಾತವಾಗಿದ್ದು ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು 112 ಗೆ ತಾನೇ ಸುಳ್ಳು ಮಾಹಿತಿ ನೀಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಆಂಬುಲೇನ್ಸ್ ಸಿಬ್ಬಂಧಿ ಮೃತದೇಹ ಮತ್ತು ಆತನನ್ನು ಕರೆದುಕೊಂಡು ಗೋಕಾಕ ತಾಲೂಕು ಆಸ್ಪತ್ರೆಗೆ ಬಂದಿದ್ದಾರೆ. ಬಳಿಕ ಸಂತೋಷನ ನಡೆಯನ್ನು ಕಂಡು ಅನುಮಾನಗೊಂಡ ನೃತ ಸಕ್ಕುಬಾಯಿ ತಾಯಿ ಪೊಲೀಸರಿಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಗೋಕಾಕ ಗ್ರಾಮೀಣ ಠಾಣೆಯ ಪೊಲೀಸರು ತಮ್ಮ ಶೈಲಿಯಲ್ಲಿ ತನಿಖೆ ಶುರು ಮಾಡಿದಾಗ ಸಂತೋಷ್ ತಾನು ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಪರಸ್ತ್ರೀಯ ಮೋಹಕ್ಕೆ ಸಿಕ್ಕು ಸಂತೋಷ್ ತನ್ನ ಹೆಂಡತಿಗೆ ಚಟ್ಟ ಕಟ್ಟಿದ್ದರೆ ಇತ್ತ ಸಂತೋಷನ ಅನೈತಿಕ ಸಂಬಂಧದ ಗುಟ್ಟು ಗೊತ್ತು ಮಾಡಿಕೊಂಡ ಪತ್ನಿ ಸಕ್ಕುಬಾಯಿ ಅವನಿಂದಲೇ ಕೊಲೆಯಾಗಿದ್ದಾಳೆ. ಸದ್ಯ ಆರೋಪಿ ಸಂತೋಷನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದು ಈ ಕುರಿತು ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










