ಬೆಳಗಾವಿ:
ಮೇಕೆಗೆ ಚಿಕಿತ್ಸೆ ನೀಡೋಕೆ ವೈದ್ಯನೋರ್ವ ಐವತ್ತು ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಅಥಣಿ ಪಟ್ಟಣದ ತಾಲೂಕು ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯ ಬಸವರಾಜ್ ಬಿಸ್ವಾಗರ್ ಎಂಬ ಪಶುವೈದ್ಯ ರೈತನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅರ್ಧ ಗಂಟೆಗೂ ಹೆಚ್ಚು ಕಾಲ ರೈತ ತನ್ನ ಮೇಕೆಯನ್ನು ತೆಗೆದುಕೊಂಡು ಬಂದು ಕಾದು ಕುಳಿತರೂ ಸಹ ವೈದ್ಯ ಸಕಾಲಕ್ಕೆ ಬಂದು ಚಿಕಿತ್ಸೆ ನೀಡದ ಕಾರಣ ಮೇಕೆ ಸಾವನ್ನಪ್ಪಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಸಾಕ್ಷಿಯಂತಾಗಿದೆ. ಇನ್ನು ಬಿಸ್ವಾಗರ್ ಕಳೆದ 25 ವರ್ಷಗಳಿಂದಲೂ ಸಹ ಅಥಣಿಯಲ್ಲಿಯೇ ಸೇವೆ ಮಾಡುತ್ತಿದ್ದಾನೆ. ಅಲ್ಲದೆ ಚಿಕಿತ್ಸೆಗೆಂದು ಬರುವ ರೈತರ ಬಳಿ ಹಣಕ್ಕೆ ಬೇಡಿಕೆ ಇಟ್ಟು ರೈತರನ್ನು ಹಿಂಡುವ ಕೆಲಸ ಮಾಡುತ್ತಿದ್ದಾನೆ. ಇಂತಹ ವೈದ್ಯನ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಸಧ್ಯ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

