ಬೆಳಗಾವಿ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಜೈನ ಮುನಿ, ಬರ್ಬರ ಹತ್ಯೆಯಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಲ್ಲಿ ನಡೆದಿದೆ. ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಒಂದೆರಡು ದಿನಗಳಿಂದ ನಾಪತ್ತೆಯಾಗಿದ್ದರು.
ಕಳೆದ 15 ವರ್ಷಗಳಿಂದ ನಂದಿಪರ್ವತದಲ್ಲಿ ವಾಸವಿದ್ದ ಕಾಮಕುಮಾರ ನಂದಿ ಮಹಾರಾಜರು ,ಎರಡು ದಿನಗಳಿಂದ ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ಚಿಕ್ಕೋಡಿ ಠಾಣೆಯಲ್ಲಿ ದೂರು ನೀಡಿದ್ದರು.
ಈ ಹಿನ್ನಲೆ ಜೈನ ಮುನಿಗಾಗಿ ಪೋಲಿಸರು ಶೋಧ ಕಾರ್ಯಚಾರಣೆ ಆರಂಭಿಸಿದ್ದರು. ತನಿಖೆ ಮಾಡಿದಾಗ ಇಬ್ಬರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.ಇದೀಗ ಜೈನಮುನಿ ನಾಪತ್ತೆ ಪ್ರಕರಣ ಸಂಬಂಧ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಶವ ಎಲ್ಲೆ ಇರಿಸಲಾಗಿದೆ ಎಂಬ ಮಾಹಿತಿ ಹೊರ ಬಿಟ್ಟಿಲ್ಲ.
ತನಿಖೆ ಸಂದರ್ಭದಲ್ಲಿ ಆರೋಪಿಗಳು ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿದ್ದರು. ಒಂದೊಂದು ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಒಂದು ಬಾರಿ ಕೊಲೆ ಮಾಡಿ ಮೃತದೇಹ ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದ್ದೇವೆ ಎಂದರೆ, ಮತ್ತೊಂದು ಬಾರಿ ಮೃತದೇಹ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎನ್ನುತ್ತಿದ್ದಾರೆ. ಹೀಗಿರುವಾಗ ಪೊಲೀಸರು ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆ 6.30 ರಿಂದ ಜೈನಮುನಿ ಕಾಮಕುಮಾರನಂದಿ ಮೃತದೇಹದ ಶೋಧಕಾರ್ಯ ಮುಂದುವರೆಸಲಿದ್ದಾರೆ. ಇನ್ನು ತಾವು ಆಶ್ರಮದಿಂದಲೇ ಸ್ವಾಮೀಜಿಯನ್ನ ಅಪಹರಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ಆಶ್ರಮದಲ್ಲಿ ನೀರವಮೌನ: ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ನೀರವಮೌನ ಆವರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಜುಲೈ 5ರ ರಾತ್ರಿ 10 ಗಂಟೆಯವರೆಗೆ ಆಶ್ರಮದ ತಮ್ಮ ಕೋಣೆಯಲ್ಲಿಯೇ ಇದ್ದ ಜೈನಮುನಿ, ಜುಲೈ 6ರ ಬೆಳಗ್ಗೆ ಅಡುಗೆ ಮಾಡುವವಳು ಆಶ್ರಮಕ್ಕೆ ಬಂದಾಗ ಜೈನಮುನಿ ಕೋಣೆಯಲ್ಲಿ ಇರಲಿಲ್ಲ. ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ವಾಸವಿದ್ದ ಕಾಮಕುಮಾರ ನಂದಿ ಮಹಾರಾಜರು. ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು.