




ಬೆಳಗಾವಿ: ಪತ್ರಿಕಾ ದಿನಾಚರಣೆ ನಿಮಿತ್ಯ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ “ಮೀಡಿಯಾ ಕಪ್” ಕ್ರಿಕೆಟ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ ಸಿಕ್ಕಿತು.
ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ (ರಿ) ವತಿಯಿಂದ ಆಯೋಜಿಸಿರುವ “ಮೀಡಿಯಾ ಕಪ್” ಪಂದ್ಯಾವಳಿಗೆ ಗುರುವಾರ ಕಾಂಗ್ರೆಸ್ ಯುವ ನಾಯಕರಾದ ಮೃಣಾಲ್ ಹೆಬ್ಬಾಳ್ಕರ್, ಅಮನ್ ಸೇಠ್ ಚಾಲನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿ.ಪಂ.ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಪೊಲೀಸ್ ಕಮೀಷನರ್ ಭೂಷಣ ಗುಲಾಬರಾವ್ ಬೊರಸೆ ಉಪಸ್ಥಿತರಿದ್ದು ಕ್ರಿಕೆಟ್ ಆಟಗಾರರನ್ನು ಹುರಿದುಂಬಿಸಿದರು.
ಮೊದಲ ಪಂದ್ಯದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ-ಬಿ ವಿರುದ್ಧ ಡಿಸಿ ಇಲೆವೆನ್ ತಂಡ ಗೆಲುವು ಸಾಧಿಸಿತು. ಈ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಮ್ಮ ತಂಡದ ಪರವಾಗಿ ಆಟವಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಎರಡನೇ ಪಂದ್ಯದಲ್ಲಿ ಎಸ್.ಪಿ. ತಂಡದ ವಿರುದ್ಧ ಅರಣ್ಯ ಇಲಾಖೆ ತಂಡ ಗೆಲುವಿನ ನಗೆ ಬೀರಿತು. ಪಂದ್ಯಾವಳಿಯಲ್ಲಿ 20ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು, ಶುಕ್ರವಾರ ಮತ್ತು ಶನಿವಾರವೂ ಪಂದ್ಯಗಳು ನಡೆಯಲಿವೆ.
ಈ ವೇಳೆ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಶ್ರೀಕಾಂತ ಕುಬಕಡ್ಡಿ, ಅಧ್ಯಕ್ಷ ಮಂಜುನಾಥ ಪಾಟೀಲ, ಉಪಾಧ್ಯಕ್ಷ ಚಂದ್ರು ಶ್ರೀರಾಮುಡು, ಸಹ ಕಾರ್ಯದರ್ಶಿ ಶ್ರೀಧರ ಕೋಟಾರಗಸ್ತಿ ಸೇರಿ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.
ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಕೇರಂ ಪಂದ್ಯಾವಳಿಯಲ್ಲಿ ಲಕ್ಷ್ಮಣ ಗಾಡಿವಡ್ಡರ-ಸಿದ್ದನಗೌಡ ಪಾಟೀಲ್ ಜೋಡಿ ಪ್ರಥಮ ಸ್ಥಾನ ಪಡೆದರೆ, ರಾಹುಲ್ ಬಡಸಕರ್-ಪ್ರಮೋದ ಗಡಕರ್ ಜೋಡಿ ದ್ವಿತೀಯ ಸ್ಥಾನ ಗಳಿಸಿತು. ಅದೇರೀತಿ ಚೆಸ್ ಪಂದ್ಯಾವಳಿಯಲ್ಲಿ ಮೈಲಾರಿ ಪಟಾತ ಪ್ರಥಮ, ಅಶೋಕ ಕಬಾಡಗಿ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.