ಬೆಳಗಾವಿ:
ಬೆಳಗಾವಿ ಜಿಲ್ಲೆಯ ಗೋಕಾಕ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿದೆ. ಗೋಕಾಕ ಕಡೆಯಿಂದ ಕೊಣ್ಣೂರು ಮಾರ್ಗವಾಗಿ ಲಾರಿ ಹೊರಟಿತ್ತು ಎನ್ನಲಾಗಿದೆ. ಗೋಕಾಕ ಹೊರವಲಯದ ಫಾಲ್ಸ್ ರಸ್ತೆಯಲ್ಲಿರುವ ಗಾಂಧೀ ಪುತ್ಥಳಿಯ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯು ಪಕ್ಕದಲ್ಲಿ ಹೋಗುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದಿದೆ. ಒಂದೇ ಬೈಕ್ ನಲ್ಲಿ ಮೂವರು ಸವಾರರು ಹೊರಟಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಲಾರಿ ಮುಗುಚಿ ಬೈಕ್ ಮೇಲೆ ಬಿದ್ದ ಪರಿಣಾಮ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರೆ ಮತ್ತೋರ್ವ ಬೈಕ್ ಸವಾರನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗೋಕಾಕ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ರಸ್ತೆಯ ಮೇಲೆಯೇ ಬಿದ್ದಿರುವ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸುವ ಕಾರ್ಯ ಸಧ್ಯ ಸ್ಥಳದಲ್ಲಿ ನಡೆದಿದೆ.

