ಬೆಳಗಾವಿ:
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಪರಿಣಾಮವಾಗಿ ರಾಜ್ಯದತ್ತ ಹಿರಿದು ಬರುವ ಕೃಷ್ಣಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಕೃಷ್ಣಾ,ವೇದಗಾಂಗಾ,ದೂಧಗಂಗಾ, ನದಿಗಳ ಒಳಹರಿವಿನ ಪ್ರಮಾಣದಲ್ಲೂ ಭಾರಿ ಪ್ರಮಾಣದ ಏರಿಕೆಯಾಗಿದೆ.ಘಟ್ಟಪ್ರದೇಶದ ನೀರು ಅಷ್ಟೆ ಅಲ್ಲದೆ ಕೊಯ್ನಾ ಜಲಾಶಯ ಸೇರಿದಂತೆ ರಾಧಾನಗರಿ ವಾರಣಾ ಜಲಾಶಯಗಳಿಂದಲೂ ನದಿಗೆ ನೀರು ಹರಿ ಬಿಡಲಾಗುತ್ತಿದೆ.ಹೀಗಾಗಿ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದು ನದಿ ಪಾತ್ರಗಳಿಗೆ ಇಳಿಯದಂತೆ ಈಗಾಗಲೇ ಜನರಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಸೂಚನೆ ನೀಡಿವೆ. ಸಧ್ಯ ಕೃಷ್ಣಾ ನದಿಗೆ 1 ಲಕ್ಷ 10 ಸಾವಿರ ಕ್ಯೂಸೇಕ್ ಒಳಹರಿವಿದ್ದು ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಇರುವ ದತ್ತ ಮಂದಿರ ಭಾಗಶಃ ಜಲಾವವೃತವಾಗಿದ್ದರಿಂದ ಪೂಜಾ ಕೈಂಕರ್ಯಗಳೂ ಸಹ ಸ್ಥಗಿತಗೊಂಡಿವೆ. ಅಲ್ಲದೆ ಚಿಕ್ಕೋಡಿ ಉಪವಿಭಾಗದಲ್ಲಿ ಇರುವ 8 ಕೆಳಹಂತದ ಸೇತುವೆಗಳು ಜಲಾವೃತವಾಗಿವೆ. ಇನ್ನು ನದಿ ಪಾತ್ರದ ಜಮೀನುಗಳಿಗೂ ಸಹ ನೀರು ನುಗ್ಗಿದ್ದು ರೈತರೂ ಸಹ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.



