ಬೆಳಗಾವಿ:
ಫೈನ್ ಕಟ್ಟಿಲ್ಲ ಎಂದು ಅವಾಚ್ಯವಾಗಿ ನಿಂದಿಸಿ ತಾಯಿ ಮಗನ ಮೇಲೆ ಹಲ್ಲೆ ಮಾಡಿದ ಆರೋಪ ಅಂಕಲಿ ಪೊಲೀಸರ ಮೇಲೆ ಕೇಳಿ ಬಂದಿದೆ.
ತಾಯಿ ಜೊತೆಗೆ ಬೈಕ್ ಮೇಲೆ ಹೊರಟಿದ್ದ ರಿಷಿಕೇಶ್ ಲಿಂಬಿಗಿಡದ್ ಎಂಬಾತನ ಮೇಲೆ ಪೊಲೀಸರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು ಹೆಲ್ಮೆಟ್ ಹಾಕದ ಹಿನ್ನೆಲೆ ಅಂಕಲಿ ಪೊಲೀಸ್ ಠಾಣೆಯ ಬಳಿ ಪೊಲೀಸರು ರಿಷಿಕೇಶ್ ಬೈಕ್ ನಿಲ್ಲಿಸಿ ಫೈನ್ ಹಾಕಿದ್ದರು ಎನ್ನಲಾಗಿದೆ. ಈ ವೇಳೆ ರಿಷಿಕೇಶ್ ತನ್ನ ಬಳಿ ಐನೂರು ರೂಪಾಯಿ ಮಾತ್ರ ಇದೆ ಎಂದು ಪೊಲೀಸರಿಗೆ ತಿಳಿಸಿ ಪೆಟ್ರೋಲ್ ಹಾಕಲು ಇನ್ನೂರು ರೂಪಾಯಿ ಇಟ್ಟುಕೊಂಡು ಮುನ್ನೂರು ರೂಪಾಯಿ ಮಾತ್ರ ರಿಷಿಕೇಶ್ ನೀಡಲು ಮುಂದಾಗಿದ್ದ ಎನ್ನಲಾಗಿದೆ.ಇದರಿಂದ ಆಕ್ರೋಶಗೊಂಡ ಪೊಲೀಸರು ರಿಷಿಕೇಶ ಹಾಗೂ ಆತನ ತಾಯಿಗೆ ಬೈಯ್ದ ಆರೋಪ ಕೇಳಿ ಬಂದಿದೆ. ಈ ವೇಳೆ ಪೊಲೀಸರು ಮತ್ತು ರಿಷಿಕೇಶ್ ಮಧ್ಯೆ ವಾಗ್ವಾದ ನಡೆದು ರಿಷಿಕೇಶ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.ಅಲ್ಲದೆ ತನ್ನ ತಾಯಿಯ ಮೇಲೆಯೂ ಸಹ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ರಿಷಿಕೇಶ್ ಆರೋಪ ಮಾಡಿದ್ದಾನೆ.ಹಲ್ಲೆ ಮಾಡಿ ನಂತರ ಬೈಕ್ ಸವಾರನ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸ್ ಸಹ ಪೊಲೀಸರು ರಿಷಿಕೇಶ್ ಮೇಲೆ ಹಾಕಿದ್ದಾರೆ.ಸಧ್ಯ ಹಲ್ಲೆಗೊಳಗಾದ ರಿಷಿಕೇಶ್ ಕುಟುಂಬಸ್ಥರು ಪೊಲೀಸರ ನಡೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಪೊಲೀಸರ ಈ ನಡೆಗೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಪೊಲೀಸರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರೂ ಆಗ್ರಹಿಸಿದ್ದಾರೆ.


