10 ಸಾವಿರ ಬೈಕಗಳ ರ್ಯಾಲಿ ಮೂಲಕ ಸಚಿವರ ಸ್ವಾಗತಿಸಲು ತಯ್ಯಾರಿ
ಬೆಳಗಾವಿ: ಸಿದ್ದರಾಮಯ್ಯ ಸರಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಸಚಿವರಾದ ನಂತರ ಮೊದಲ ಬಾರಿಗೆ ಭಾನುವಾರ ಬೆಳಗಾವಿಗೆ ಆಗಮಿಸಲಿದ್ದಾರೆ.ಒಟ್ಟಾಗಿ ಆಗಮಿಸುತ್ತಿರುವ ಸಚಿವರನ್ನು ಸ್ವಾಗತಿಸಲು ಇಡೀ ಕುಂದಾನಗರಿ ಸಜ್ಜಾಗಿದ್ದು, ವಿಮಾನ ನಿಲ್ದಾಣದಿಂದಲೇ ಬೃಹತ್ ಬೈಕ ರ್ಯಾಲಿ ಮೂಲಕ ನಗರಕ್ಕೆ ಕರೆತರಲು ಕಾರ್ಯಕರ್ತರು, ಅಭಿಮಾನಿಗಳು ನಿರ್ಧರಿಸಿದ್ದಾರೆ.
ಮೇ 20ರಂದು ಸತೀಶ್ ಜಾರಕಿಹೊಳಿ ಹಾಗೂ ಇಂದು ಲಕ್ಷ್ಮೀ ಹೆಬ್ಬಾಳಕರ್ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಬ್ಬರೂ ಈ ಸರಕಾರದ ಸಚಿವರಾದ ನಂತರ ಮೊದಲಬಾರಿಗೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆ 10.30ಕ್ಕೆ ಇಬ್ಬರೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.ಇಬ್ಬರೂ ಸಚಿವರನ್ನು ಅದ್ಧೂರಿಯಾಗಿ ವಿಮಾನ ನಿಲ್ದಾಣದಲ್ಲೇ ಸ್ವಾಗತಿಸಿ ಕರೆತರಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಿರ್ಧರಿಸಿದ್ದಾರೆ. ವಿಮಾನ ನಿಲ್ದಾಣದಿಂದಲೇ 10 ಸಾವಿರ ಬೈಕಗಳ ರ್ಯಾಲಿ ಮೂಲಕ ಸಚಿವರುಗಳನ್ನು ನಗರಕ್ಕೆ ಕರೆತರಲಾಗುತ್ತಿದೆ.ಬೆಳಗಾವಿಗೆ ಆಗಮಿಸಿದ ನಂತರ ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜ, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧೀಜಿ ಸೇರಿದಂತೆ ಮಹಾನ್ ವ್ಯಕ್ತಿಗಳ ಪುತ್ಥಳಿಗಳಿಗೆ ಸಚಿವರು ಮಾಲಾರ್ಪಣೆ ಮಾಡಲಿದ್ದಾರೆ.