ಬೆಳಗಾವಿ :ಗ್ರಾಮೀಣ ಮತಕ್ಷೇತ್ರದಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಶಾಸಕಿ ಮತದಾರರಿಗೆ ಆಮಿಷ ತೋರಿಸುತ್ತಿದ್ದಾರೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಕ್ಷೇತ್ರದ ಜನರಿಗೆ ಆಕಾಂಕ್ಷಿಗಳು ಆಮಿಷ ತೋರಿಸುವುದು ಸ್ವಾಭಾವಿಕ. ಇದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಜೋರು ನಡೆಯುತ್ತಿದೆ. ಈ ಬೆಳವಣಿಗೆ ಸರಿಯಲ್ಲ. ಯಾವ ಪಕ್ಷದವರು ಇಂಥ ಕೆಲಸ ಮಾಡಬಾರದು. ಅಭಿವೃದ್ಧಿ ಮಾಡಿದ್ದರೆ, ಉಡುಗೊರೆ ಕೊಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ಗ್ರಾಮೀಣ ಮತಕ್ಷೇತ್ರದಲ್ಲಿ ದೊಡ್ಡ ದೊಡ್ಡ ಪೆಂಡಾಲ್ ಹಾಕಿ ಜನರಿಗೆ ಉಡುಗೊರೆ ಕೊಡುವುದು ನಾಚಿಗೇಡಿತನದ ಸಂಗತಿ. ಮನೆ ಮಗಳು ಎನ್ನುವುದು ಅವರು ಭಾಷಣದಲ್ಲಿ ಹೇಳೋದು. ಆಣೆ ತೊಗೊಂಡು ಜನರಿಂದ ಮತ ಹಾಕಿ ಎನ್ನುವುದು ಎಷ್ಟು ಸರಿ ಎಂದ ಅವರು, ಜನರು ಇದರ ಬಗ್ಗೆ ಒಳ್ಳೆಯ ತೀರ್ಮಾನ ಮಾಡುತ್ತಾರೆ ಎಂದರು.
ಬಿಜೆಪಿಯಿಂದ ಗ್ರಾಮೀಣ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಧನಂಜಯ ಜಾಧವ, ನಾಗೇಶ ಮನ್ನೋಳಕರ ಟಿಕೆಟ್ ನೀಡಿದರೆ ಅವರಿಗೆ ಬೆಂಬಲಿಸುತ್ತೇನೆ. ನನಗೆ ಸಿಕ್ಕರೆ ಅವರು ನನಗೆ ಬೆಂಬಲಿಸುತ್ತಾರೆ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಈ ಬಾರಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ನಿಶ್ಚಿತ ಎಂದರು.
ಗ್ರಾಮೀಣ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರು ಸಮಾವೇಶ ಮಾಡುತ್ತಿರುವುದು ಅವರ ಅಭಿಮಾನಗಳ ಆಯೋಜಿಸಿದ್ದಾರೆ. ಅದು ಬಿಜೆಪಿ ಕಾರ್ಯಕ್ರಮ ಅಲ್ಲ. ನಾನು ಹೋಗುವುದಿಲ್ಲ. ಅಲ್ಲದೆ, ರಮೇಶ ಜಾರಕಿಹೊಳಿ ಅವರ ಬಗ್ಗೆ ಗೌರವ ಇದೆ. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಬೇರೆ ಬ್ಯಾನರ್ ನಲ್ಲಿ ನಡೆಯುವ ಸಮಾವೇಶಕ್ಕೆ ಹೋಗುವುದಿಲ್ಲ ಎಂದರು.