ಬೆಳಗಾವಿ: ಮಹಿಳೆಯನ್ನು ಅಕ್ರಮ ಬಂಧನದಲ್ಲಿರಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ರಪೀಕ್ ಲಾಲಸಾಬ ಬೇಪಾರಿ ಮುನವಳ್ಳಿ ಎಂಬಾತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ಒಂದು ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ಆರೋಪಿ ರಫೀಕ ಪಿರ್ಯಾದಿದಾರರೊಂದಿಗೆ ಸಲುಗೆಯಿಂದ ಮಾತನಾಡಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಲ್ಲದೆ, ಅಶ್ಲೀಲ ಫೋಟೊ ತೆಗೆದು ವೈರಲ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡಿದ್ದ.ಅಲ್ಲದೆ ಗಂಡನಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿ, ಬೆಳಗಾವಿಯಲ್ಲಿ ನೊಂದ ಮಹಿಳೆಯನ್ನು ಬಂಧಿಸಿ ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿದ್ದ. ಜೊತೆಗೆ ಕೀಳು ಜಾತಿಯವಳು ಎಂದು ನಿಂದಿಸಿ ತನ್ನ ಧರ್ಮ ಮತಾಂತರಕ್ಕೆ ಒತ್ತಾಯಿಸಿದ್ದ. ಆರೋಪಿ ಅಷ್ಟೇ ಅಲ್ಲದೇ ಇತರ 7 ಆರೋಪಿಗಳು ಜೀವದ ಧಮಕಿ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯ ಬೆಳಗಾವಿಯ ನ್ಯಾಯಾಧೀಶರಾದ ಸವಿತಾಕುಮಾರಿ ಎನ್ ಅವರು ಇಂದು ದಿನಾಂಕ 10.07.2026 ರಂದು ತೀರ್ಪು ನೀಡಿದ್ದು ಆರೋಪಿ ನಂ.1 ರಪೀಕ್ ಲಾಲಸಾಬ ಬೇಪಾರಿ ಈತನಿಗೆ ಕಲಂ 376(2) BNS ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 1,00,000 ರೂ ದಂಡ. SC/ST ಕಾಯ್ದೆ ಕಲಂ 3(2) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 1,00,000 ರೂ ದಂಡ. ಧರ್ಮ ಮತಾಂತರ ಕಾಯ್ದೆ ಕಲಂ 5(1) ಅಡಿಯಲ್ಲಿ 5 ವರ್ಷ ಕಠಿಣ ಕಾರಾಗೃಹ ಮತ್ತು 25,000 ರೂ ದಂಡ. ಒಟ್ಟು ಜೀವಾವಧಿ ಶಿಕ್ಷೆ ಮತ್ತು 2,75,000 ರೂ ದಂಡ ವಿಧಿಸಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಇನೋವಾ ಕಾರು KA-29-N-3274 ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಸವದತ್ತಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಸುರೇಶ ಸಿ ಬೆಂಡೆಗುಂಬಳ ದಾಖಲಾಧಿಕಾರಿಯಾಗಿದ್ದು, ಡಿಎಸ್‌ಪಿ ಶ್ರೀ ಪಾಂಡುರಂಗಯ್ಯ ಎಮ್ ತನಿಖೆ ನಡೆಸಿದ್ದರು. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್. ಜಿ. ದೇವರಡ್ಡಿ ವಾದ ಮಂಡಿಸಿದರು. ತನಿಖೆಗೆ ಸಹಕರಿಸಿದ ಎಲ್ಲಾ ಅಧಿಕಾರಿ-ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.










