ವರುಣದೇವ ಮುನಿಸಿಕೊಂಡ ಕಾರಣ ಕೃಷಿಕರು ಕಂಗಾಲಾಗಿದ್ದಾರೆ.ಮಳೆಗಾಗಿ ಪ್ರಾರ್ಥಿಸಿ ಹಳ್ಳಿಗಳಲ್ಲಿ ವಿವಿಧ ಆಚರಣೆ ನಡೆಯುತ್ತಿವೆ. ಅದರಂತೆಯೇ ಬೆಳಗಾವಿ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಲಾಗಿದೆ.ಸಾಮಾನ್ಯವಾಗಿ ನಡೆಯುವ ವಧು-ವರನ ಮದುವೆಗೂ ಇದಕ್ಕೂ ಏನು ವ್ಯತ್ಯಾಸ ಇರಲಿಲ್ಲ.ಮುನ್ಯಾಳದ ಹನುಮಾನ ದೇವಸ್ಥಾನದ ಆವರಣದಲ್ಲಿ ಭಾನುವಾರ ಮಧ್ಯಾಹ್ನ 12.15ಕ್ಕೆ ಎರಡೂ ಕತ್ತೆಗಳ ಮದುವೆ ಶಾಸ್ತ್ರೋಪ್ತವಾಗಿ ನೆರವೇರಿತು.ಗ್ರಾಮಸ್ಥರು ಗಂಡು ಕತ್ತೆಗೆ ಕಾಂತೇಶ ಮತ್ತು ಹೆಣ್ಣು ಕತ್ತೆಗೆ ಕಸ್ತೂರಿ ಎಂದು ನಾಮಕರಣ ಮಾಡಿ ಅವುಗಳಿಗೆ ಮದುವೆ ಮಾಡಿದರು.ಮನುಷ್ಯರ ಮದುವೆಯಂತೆಯೇ ಕತ್ತೆಗಳ ಮದುವೆಗೂ ಸಹ ಅರಿಸಿನಶಾಸ್ತ್ರ, ನೂಲು ಸುತ್ತುವ ಕಾರ್ಯಕ್ರಮ, ಹೀಗೆ ಮನುಷ್ಯರ ಮದುವೆಯಲ್ಲಿ ನಡೆಯುವ ಶಾಸ್ತ್ರಗಳನ್ನು ಗ್ರಾಮಸ್ಥರು ಮಾಡಿದರು.ರಬಕವಿಯಿಂದ ಭಾನುವಾರ ಬೆಳಿಗ್ಗೆ ಕತ್ತೆಗಳನ್ನು ತರಲಾಗಿದ್ದು ಬಾಸಿಂಗ, ಹೊಸ ಬಟ್ಟೆ, ತಾಳಿ ಮತ್ತಿತರ ವಸ್ತು ಬಳಸಿ, ಥೇಟ್ ವಧು–ವರನಂತೆ ಅವುಗಳನ್ನು ಅಲಂಕರಿಸಿ ಗ್ರಾಮಸ್ಥರು ಮದುವೆ ಮಾಡಿದರು.ಗ್ರಾಮೀಣ ಭಾಗದ ಮಾದರಿಯಲ್ಲಿ ಮದುವೆ ಮಾಡಿದ ಗ್ರಾಮಸ್ಥರು ಅಕ್ಷತಾರೋಪನದ ನಂತರ ಊರಲ್ಲಿ ಅವುಗಳ ಮೆರವಣಿಗೆ ಮಾಡಿದರು. ಅಲ್ಲದೆ ಮೆರವಣಿಗೆಯುದ್ದಕ್ಕೂ ಜಾನಪದ ವಾದ್ಯಗಳು ರಂಗು ತುಂಬಿತ್ತು.
ಈ ಸಮಾರಂಭಕ್ಕೆ ಸಾಕ್ಷಿಯಾದ 300ಕ್ಕೂ ಅಧಿಕ ಜನರಿಗೆ ಸಿಹಿಯೂಟ ಉಣ ಬಡಿಸಿ ಗ್ರಾಮಸ್ಥರು ಸಂಭ್ರಮಿದರು.
ಇನ್ನು ಇದೇ ಗ್ರಾಮದಲ್ಲಿ ಸುಮಾರು 20 ವರ್ಷಗಳ ಬಳಿಕ ಇಂಥ ಆಚರಣೆ ನಡೆಯುತ್ತಿದ್ದು ಕತ್ತೆಗಳ ಮದುವೆಗೆಂದೆ ಗ್ರಾಮಸ್ಥರು ಸುಮಾರು ₹60 ಸಾವಿರ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.












