

ಬೆಳಗಾವಿ:
ಬೆಳ್ಳಂ ಬೆಳಗ್ಗೆ ಅಬಕಾರಿ ಹೆಚ್ಚುವರಿ ಆಯುಕ್ತ ವೈ ಮಂಜುನಾಥ್ ಮನೆಯ ಮೇಲೆ ದಾಳಿ ಮಾಡಿದ ಅಧಿಕಾರಗಳು ಸದ್ಯ ಮಂಜುನಾಥ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಬೆಂಗಳೂರಿನಲ್ಲಿರುವ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಮೀಟ್ ಅಪಾರ್ಟ್ ಮೆಂಟ್ ನಿಂದ ಮಂಜುನಾಥ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ವಿದೇಶಿ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ಲಿಂಕ್ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು ಬೆಳಗಾವಿ ಹಾಗೂ ಬೆಂಗಳೂರು ಸೇರಿ ಮಂಜುನಾಥ್ ಗೆ ಸೇರಿದ ಮನೆ ಆಪ್ತರ ಮನೆಗಳು ಸೇರಿದಂತೆ ಒಟ್ಟು ಆರು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ಬೆಳಗಾವಿಯ ದೂರದರ್ಶನ ನಗರಕ್ಕೆ ಇಡಿ ಡಿವೈಎಸ್ಪಿ ದರ್ಜೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಹತ್ವದ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಡಿವೈಎಸ್ಪಿ ದರ್ಜೆಯ ಅಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ.ಇನ್ನು ಇಡಿ ಅಧಿಕಾರಿಗಳು ಕೇವಲ ಸತೀಶ್ ಜಾರಕಿಹೊಳಿ ಅಳಿಯ ವೈ ಮಂಜುನಾಥ ಮನೆಯ ಮೇಲೆ ಮಾತ್ರ ದಾಳಿ ಮಾಡಿಲ್ಲ. ಬದಲಾಗಿ ತುಮಕೂರಿನ ಅಬಕಾರಿ ಎಸ್ಪಿ ಸತೀಶ್ ಕಾಗಲಿ ಮನೆಯ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವೈ ಮಂಜುನಾಥ್ ಅವರ ಆಪ್ತ ವಲಯದಲ್ಲಿ ಸತೀಶ್ ಕಾಗಲಿ ಗುರುತಿಸಿಕೊಂಡಿದ್ದರು.ವಿದೇಶಿ ಅಕ್ರಮ ವ್ಯವಹಾರದಲ್ಲಿ ಮಂಜುನಾಥ ಜೊತೆಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು ಶಂಕೆ ಹಿನ್ನೆಲೆಯಲ್ಲಿ ಸತೀಶ್ ಕಾಗಲಿ ಮನೆ ಮೇಲೂ ಇಡಿ ಅಧಿಕಾರಿಗಳ ದಾಳಿ ಮಾಡಿದ್ದಾರೆ.ಅಥಣಿಯ ಐನಾಪುರದಲ್ಲಿರುವ ಮನೆ ಹಾಗೂ ಬೆಳಗಾವಿಯ ಶ್ರೀನಗರದಲ್ಲಿರುವ ಸತೀಶ್ ಕಾಗಲಿ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶ್ರೀನಗರದ ಅಪಾರ್ಟ್ಮೆಂಟ್‌ನಲ್ಲಿ ಸತೀಶ್ ಕಾಗಲಿ ನಿವಾಸವಿದ್ದು
ಐನಾಪುರ ಹಾಗೂ ಶ್ರೀನಗರದ ಎರಡೂ ಕಡೆ ಸತೀಶ್ ಕಾಗಲಿ ಮನೆ ಮೇಲೆ ದಾಳಿಯನ್ನು ಇಡಿ ಅಧಿಕಾರಿಗಳು ನಡೆಸಿದ್ದಾರೆ.










