



ಬೆಳಗಾವಿ:
ಪ್ರತಿಭಟನೆ ನಡೆಸದಂತೆ ಸರಕಾರ ಎಸ್ಮಾ ಜಾರಿ ಮಾಡಿದರೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಆ.5 ರಿಂದ ಸಾರಿಗೆ ನೌಕರರು ಅನಿರ್ದಿಷ್ಟವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ಜಂಟಿ ಕ್ರಿಯಾ ಸಮಿತಿ ಸಂಚಾಲಕ ನಾಗೇಶ ಸಾತೇರಿ ಹೇಳಿದರು.
ಶನಿವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರಕಾರ ಸಾರಿಗೆ ನೌಕರರು ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿ ಮಾಡಿದೆ ಇದಕ್ಕೆ ಬಗ್ಗದೆ ರಾಜ್ಯದಲ್ಲಿರುವ ಎಲ್ಲ ಸಾರಿಗೆ ನೌಕರರು ನಮ್ಮ ಪ್ರಮುಖ ಮೂರು ಬೇಡಿಕೆ ಈಡೇರಿಸುವವರೆಗೂ ಅನಿರ್ದಿಷ್ಟವಧಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.
ಕಳೆದ 2020ರ ಶೇ.15%ರ ವೇತನ ಪರಿಷ್ಕರಣೆ 38 ತಿಂಗಳ ಬಾಕಿ ಹಣವನ್ನು ರಾಜ್ಯ ಸರಕಾರ ಕೂಡಲೇ ಪಾವತಿಸಬೇಕು ಹಾಗೂ 2023ರಲ್ಲಿದ್ದ ಸಾರಿಗೆ ನೌಕರರ ಮೂಲ ವೇತನಕ್ಕೆ ಶೇ.31% ರಷ್ಟು ತುಟ್ಟಿ ಭತ್ಯೆ ವಿಲಿನಗೊಳಿಸಿ ಶೇ.25%ರಷ್ಟು ವೇತನವನ್ನು ಹೆಚ್ವಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಸಲ ಸಾರಿಗೆ ನೌಕರರು ಧರಣಿ ನಡೆಸಿದ ವೇಳೆ ಕೆಲಸದಿಂದ ವಜಾ ಮಾಡಿದವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಈ ಸಲದ ಹೋರಾಟದಲ್ಲಿ ಸಾಕಷ್ಟು ಸಂಘಟನೆಗಳು ಬೆಂಬಲ ಕೊಟ್ಟಿವೆ. ಆದರೆ ಸಾರಿಗೆ ನೌಕರರೇ ನೇತೃತ್ವ ವಹಿಸಿಕೊಳ್ಳುತ್ತೇವೆ ಎಂದರು.
ಸಿ.ಎಸ್.ಬಿಡ್ನಾಳ, ಸುರೇಶ ಯರಡ್ಡಿ, ಈರಣ್ಣಾ ಮದವಾಲ, ರಾಜು ಪನ್ಯಾಗೋಳ, ಡಿ.ಎನ್.ಕಾಂಬಳೆ, ಪ್ರಕಾಶ ಶಿದ್ನಾಳ, ಉಮೇಶ, ವೈ.ಜಿ.ಬಟ್ಟಸೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.